
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಹೊನ್ನಾದೇವಿಪುರ -ಗೂಳ್ಯ ರಸ್ತೆಯ ಡಾಂಬರೀಕರಣ ಕಳಪೆಯಿಂದ ಕೂಡಿದೆ ಎಂಬ ಬಿಜೆಪಿ ಮುಖಂಡರ ಆರೋಪಕ್ಕೆ ಕಾಂಗ್ರೆಸ್ ಮುಖಂಡರು ತಿರುಗೇಟು ನೀಡಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ 1.5 ಕೋಟಿ ಅನುದಾನದಲ್ಲಿ ತಾಲೂಕಿನ ಹೊನ್ನಾದೇವಿಪುರ-ಗೂಳ್ಯ ರಸ್ತೆಗೆ 1.5 ಕಿ.ಮೀ ಡಾಂಬರ್ ಹಾಕಲಾಗಿದೆ. ಆದರೆ ಬಿಜೆಪಿ ಯ ಕೆಲ ಮುಖಂಡರು ಬೇಕೆಂತಲೇ ಹಾರೇಕೋಲಿನಿಂದ ರಸ್ತೆಯ ಡಾಂಬರ್ ಅಗೆದು ಕಾಮಗಾರಿ ಕಳಪೆ ಎಂದು ದೂರುತ್ತಿದ್ದಾರೆ. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈಗಿರುವ ರಸ್ತೆಯ ಮೇಲೆ ಇನ್ನೂ ಒಂದು ಪದರ ಡಾಂಬರು ಹಾಕಬೇಕಿದೆ. ಅಷ್ಟರಲ್ಲಿ ಬಿಜೆಪಿ ಮುಖಂಡರು ವೃಥಾ ಆರೋಪ ಮಾಡಿದ್ದಾರೆ. ಈ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಜಿ.ಪಂ ಮಾಜಿ ಸದಸ್ಯ ಚುಂಚೇಗೌಡ ಹೇಳಿದರು.
ಗುರುವಾರ ಹೊನ್ನಾದೇವಿಪುರ-ಗೂಳ್ಯ ರಸ್ತೆ ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು 20 ವರ್ಷಗಳಿಂದ ಈ ಗ್ರಾಮಕ್ಕೆ ರಸ್ತೆ ಇರಲಿಲ್ಲ. ರಾತ್ರಿ ಹೊತ್ತು ಓಡಾಡಲೂ ಗ್ರಾಮಸ್ಥರು ಪರದಾಡಬೇಕಾಗಿತ್ತು. ಕೊನೆಗೂ ಹೊನ್ನಾದೇವಿಪುರ ರಸ್ತೆಗೆ ಡಾಂಬರು ಭಾಗ್ಯ ಸಿಕ್ಕಿದೆ, ಇದರಲ್ಲಿ ರಾಜಕೀಯ ಮಾಡಬಾರದು, ಗ್ರಾಮದ ಅಭಿವೃದ್ಧಿಗೆ ಪಕ್ಷ ಬೇಧ ಮರೆತು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಡಾಂಬರೀಕರಣ ಕಾಮಗಾರಿ ಕಳಪೆಯೋ ಅಥವಾ ಗುಣಮಟ್ಟದಿಂದ ಕೂಡಿದೆಯೋ ಎಂಬುದು ಸಂಬಂಧಿಸಿದ ಇಲಾಖೆಯ ಎಂಜಿನಿಯರ್ ಗಳು ಕಾಮಗಾರಿ ಪರಿಶೀಲನೆ ಮಾಡಿ ವರದಿ ನೀಡುತ್ತಾರೆ. ಆಗ ಈ ಕುರಿತು ಸತ್ಯ ತಿಳಿಯಲಿದೆ. ಆದರೆ, ಇದ್ಯಾವುದೂ ನಡೆದೇ ಇಲ್ಲ. ಕಾಮಗಾರಿ ಇರುವಾಗಲೇ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ವಿಧಾನಸಭೆ ಚುನಾವಣೆಗೆ ಮುನ್ನವೇ ತಾಲೂಕಿನಲ್ಲಿ 40 ಕೋಟಿ ಅನುದಾನದಲ್ಲಿ 40 ಕಿ.ಮೀ ಡಾಂಬರೀಕರಣ ಕಾಮಗಾರಿ ಆರಂಭವಾಗಿತ್ತು. ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಕಾಮಗಾರಿ ನಿಲ್ಲಿಸಲಾಗಿತ್ತು. ಈಗ ಮತ್ತೆ ಪ್ರಾರಂಭ ಮಾಡಲಾಗಿದೆ. ಎಲ್ಲಾ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಕೆಲವೊಂದು ಕಡೆ ಬಿಜೆಪಿ ಮುಖಂಡರು ಡಾಂಬರೀಕರಣ ಕಾಮಗಾರಿ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ರೀತಿಯ ಸುಳ್ಳು ಆರೋಪ ಮಾಡುತ್ತಿರುವ ಪುಡಾರಿಗಳನ್ನು ಹಾಲಿ ಶಾಸಕರು ದೂರವಿಡಬೇಕು. ಇಲ್ಲದಿದ್ದರೆ ಶಾಸಕರಿಗೂ ಕೆಟ್ಟ ಹೆಸರು ಬರುತ್ತದೆ ಎಂದು ಸಲಹೆ ನೀಡಿದರು.
ಈ ವೇಳೆ ಚಂದ್ರಶೇಖರ್, ಶಶಿಕುಮಾರ್, ಅಶ್ವತ್ ನಾರಾಯಣ ಸೇರಿದಂತೆ ಇತರರು ಉಪಸ್ಥಿತರಿದ್ದರು.