
ದೊಡ್ಡಬಳ್ಳಾಪುರ : ದಕ್ಷಿಣ ಭಾರತದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಶ್ರೀ ಘಾಟಿ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಪ್ರಸಿದ್ಧ ಬ್ರಹ್ಮರಥೋತ್ಸವ ಕಾರ್ಯಕ್ರಮವು ಜನವರಿ 16 ರಂದು ಮಂಗಳವಾರ ಮಧ್ಯಾಹ್ನ 12-15ರಿಂದ 12-30 ಗಂಟೆಗೆ ಈ ಸಲ್ಲುವ ಶುಭ ಮೇಷ ಲಗ್ನದ ಮುಹೂರ್ತದಲ್ಲಿ ನಡೆಯಲಿದೆ.
ಷಷ್ಠಿಯ ದಿನದಂದು ದೇವಸ್ಥಾನದಲ್ಲಿ ಮುಂಜಾನೆ 3ರಿಂದ ಪೂಜಾ ಕಾರ್ಯಗಳು ಆರಂಭವಾಗೊಳ್ಳಲಿವೆ. ಅಭಿಷೇಕ ಕಾರ್ಯಗಳು ನೆರವೇರಲಿದೆ. ಗರ್ಭಗುಡಿಯಲ್ಲಿನ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಲಕ್ಷ್ಮೀನರಸಿಂಹಸ್ವಾಮಿ ಮೂರ್ತಿಗಳಿಗೆ ಪ್ರಾತಃ ಕಾಲದಲ್ಲಿ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಶ್ರೀಗಂಧಾಭಿಷೇಕ, ಭಸ್ಮಾಭಿಷೇಕದೊಂದಿಗೆ ವಿಶೇಷ ಹೂವಿನ ಅಲಂಕಾರ ಮಾಡುವ ಮೂಲಕ ಜಾತ್ರಾ ಮಹೋತ್ಸವವನ್ನು ನೆರವೇರಿಸಲಾಗುತ್ತದೆ. ರಾತ್ರಿ 8:30ರವರೆಗೂ ಭಕ್ತರಿಗೆ ದೇವರ ದರ್ಶನ ವ್ಯವಸ್ಥೆ ದೊರೆಯಲಿದೆ.