
ದೊಡ್ಡಬಳ್ಳಾಪುರದ ತಾಲ್ಲೂಕಿನ ತೂಬಗೆರೆ ಹೋಬಳಿಯ ಹಾಡೋನಹಳ್ಳಿ ಗ್ರಾಮದಲ್ಲಿ ಕಳೆದ ಗುರುವಾರ ಹಸು ಕಟ್ಟುವ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ಅವಘಡದ ಪರಿಣಾಮದಿಂದ ಎರಡು ಹಸುಗಳು ಸೇರಿದಂತೆ ತೀವ್ರವಾಗಿ ಗಾಯಗೊಂಡಿದ್ದ ರೈತ ರಾಜಣ್ಣ ಮನೆಗೆ ಸೋಮವಾರ ಸಂಜೆ ಕರ್ನಾಟಕ ಹಾಲು ಮಹಾಮಂಡಳಿ ನಿರ್ದೇಶಕ ಬಿ.ಸಿ ಆನಂದ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ರೈತ ರಾಜಣ್ಣ ಮತ್ತು ಕುಟುಂಬಸ್ಥರೊಂದಿಗೆ ಮಾತನಾಡಿ ಹಸುಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ನಿಮಗೆ ಭಗವಂತ ಹೆಚ್ಚಿನ ಅಪಾಯವಾಗದಂತೆ ರಕ್ಷಿಸಿದ್ದಾನೆ. ನೀವು ಮಾಡಿದ ಪುಣ್ಯದ ಕೆಲಸ ನಿಮ್ಮನ್ನ ಕಾಪಾಡಿದೆ. ಯಾವುದಕ್ಕೂ ಎದೆಗುಂದದೆ ಧೈರ್ಯವಾಗಿರಿ. ಕೆಎಂಎಫ್ ಮತ್ತು ಬಮೂಲ್ ಒಕ್ಕೂಟದಿಂದ ಒಂದು ಲಕ್ಷ ಪರಿಹಾರ ಕೊಡಿಸುವೆ. ಹಸುಗಳ ಹೆಚ್ಚಿನ ಚಿಕಿತ್ಸೆಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಪಶುವೈದ್ಯರಿಂದ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ರೈತ ರಾಜಣ್ಣ ಮತ್ತು ಮಗಳ ಕೈಗೆ ಸುಟ್ಟ ಗಾಯಗಳ ಚಿಕಿತ್ಸಾ ವೆಚ್ಚವನ್ನು ವೈಯಕ್ತಿಕವಾಗಿ ಭರಿಸಲಾಗುವುದು ಎಂದು ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹಾಡೋನಹಳ್ಳಿ ಡೇರಿ ಸ್ಥಾಪನೆಯಾದ ಸಂದರ್ಭದಿಂದಲೂ ಈವರೆಗೆ ರೈತ ರಾಜಣ್ಣ ಮತ್ತು ಅವರ ತಂದೆಯವರು ಹೈನುಗಾರಿಕೆಯನ್ನು ಜೀವನವನ್ನಾಗಿಸಿಕೊಂಡು ಡೇರಿಗೆ ಹಾಲು ಹಾಕುತ್ತಿದ್ದಾರೆ. ಇಂತಹ ನಿಷ್ಕಲ್ಮಶ ಹೃದಯ ಹೊಂದಿರುವ ರೈತನಿಗೆ ಹೆಚ್ಚಿನ ಅಪಾಯವಾಗದಂತೆ ಆ ಕಾಮಧೇನು ಕಾಪಾಡಿದ್ದಾಳೆ. ಹಸುಗಳ ಚಿಕಿತ್ಸೆಗೆ ಸ್ಪಂದಿಸುವಂತೆ ಪಶು ವೈದ್ಯರಿಗೆ ಮತ್ತು ದೊಡ್ಡಬಳ್ಳಾಪುರ ಒಕ್ಕೂಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪರಿಹಾರ ಧನ ಮತ್ತು ವಿಮೆ ವಿತರಿಸಲು ಕೈಗೊಳ್ಳಬೇಕಾದ ಕಡತದ ಕೆಲಸವನ್ನು ಶೀಘ್ರವಾಗಿ ಮುಗಿಸಿ ಕಡತವನ್ನು ತಾಲ್ಲೂಕು ಶಿಬಿರ ಕಚೇರಿಗೆ ರವಾನಿಸುವಂತೆ ಹಾಡೋನಹಳ್ಳಿ ಡೇರಿ ಕಾರ್ಯದರ್ಶಿ ನಾಗರಾಜುಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಘಟನೆ ವಿವರ:
ರೈತ ರಾಜಣ್ಣ ಅವರು ಕೊಟ್ಟಿಗೆಯಲ್ಲಿ ಹಸುಗಳನ್ನು ಕಟ್ಟಿ ಮಲಗಿದ್ದ ಸಮಯದಲ್ಲಿ ರಾತ್ರಿ ಒಂದು ಗಂಟೆ ಸುಮಾರಿನಲ್ಲಿ ಕೊಟ್ಟಿಗೆ ಸುತ್ತಲು ಹೊದಿಸಲಾಗಿದ್ದ ಹುಲ್ಲಿಗೆ ಬೆಂಕಿ ಬಿದ್ದು, ಎರಡು ಹಸುಗಳು ಗಂಭೀರವಾಗಿ ಗಾಯಗೊಂಡಿದ್ದವು. ಹಸುವನ್ನು ಕಾಪಾಡಲು ಮುಂದಾದ ರೈತ ರಾಜಣ್ಣ ಹಾಗೂ ಅವರ ಮಗಳಿಗೆ ಸುಟ್ಟ ಗಾಯಗಳಾಗಿದ್ದವು
ಈ ಸಂದರ್ಭದಲ್ಲಿ ತಾಲ್ಲೂಕು ಶಿಬಿರ ಕಚೇರಿ ವ್ಯವಸ್ಥಾಪಕ ಎಲ್.ಬಿ ನಾಗರಾಜು, ಶಿವಪುರ ಡೇರಿ ಅಧ್ಯಕ್ಷ ನಾಗರಾಜು, ಹಾಡೋನಹಳ್ಳಿ ಡೇರಿ ಕಾರ್ಯದರ್ಶಿ ನಾಗರಾಜು, ರೈತ ರಾಜಣ್ಣನ ಕುಟುಂಬಸ್ಥರು ಇದ್ದರು.