
ದೊಡ್ಡಬಳ್ಳಾಪುರ ( ವಿಜಯಮಿತ್ರ ) : ಅನ್ನದಾತ ರೈತನು ತನ್ನ ಹಕ್ಕನ್ನು ಪಡೆಯಲು ಡಾ. ಬಿ. ಆರ್.ಅಂಬೇಡ್ಕರ್ ರಚಿತಾ ಸಂವಿಧಾನವು ಸಹಕಾರಿಯಾಗಿದೆ. ಹಾಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರೈತರ ಬೆನ್ನೆಲುಬು ಎಂದರೆ ತಪ್ಪಾಗಲಾರದು ಎಂದು ಹಳ್ಳಿ ರೈತ ಅಂಬರೀಶ್ ಅಭಿಪ್ರಾಯ ಪಟ್ಟರು
ತೂಬಗೆರೆ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ 133 ನೇ ಡಾ. ಬಿ ಆರ್ ಅಂಬೇಡ್ಕರ್ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರೈತನು ಉಳಿಯಲು ಮುಖ್ಯ ಕಾರಣ ಸಂವಿಧಾನವೇ ಆಗಿದೆ. ಯಾವುದೇ ರೀತಿಯ ಅನ್ಯಾಯ ಅಕ್ರಮಗಳು ನಡೆದ ಸಂದರ್ಭದಲ್ಲಿ ರೈತನ ಧ್ವನಿಯಾಗಿ ಸಂವಿಧಾನ ನಿಲ್ಲುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ, ಸರ್ವ ಸಮುದಾಯದ ನಾಯಕರು ಎಂದರು.
ಹಸಿರು ಶಾಲನ್ನು ರೈತರು ತಮ್ಮ ಪ್ರತೀಕವಾಗಿ ಧರಿಸುತ್ತೇವೆ ಅಂತೆಯೇ ನೀಲಿ ಸಾಲನ್ನು ಕೂಡ ಧರಿಸಬೇಕಿದೆ. ಒಂದು ಅನ್ನದಾತನ ಸಂಕೇತವಾದರೆ ಮತ್ತೊಂದು ದೃಢತೆ, ಸಮಾನತೆ ಮತ್ತು ಹಕ್ಕು ಪ್ರತಿಪಾದನೆಯ ಸಂಕೇತವಾಗಿದೆ. ಸಮಾಜದಲ್ಲಿ ರೈತರಿಗೆ ಅನ್ಯಾಯವಾದಾಗ ನಮ್ಮ ಪರ ಬೆಂಬಲವಾಗಿ ನಿಲ್ಲುವುದು ಕೇವಲ ಸಂವಿಧಾನ ಮಾತ್ರ, ಪ್ರತಿ ರೈತನು ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ನೆನೆಯಬೇಕಿದೆ ಎಂದರು
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಉದಯರಾಧ್ಯ, ನಾಗರಾಜು,ಕಾಂತರಾಜು, ರಾಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.