ದೊಡ್ಡಬಳ್ಳಾಪುರ : ಸದಾ ದಾನಿಗಳ ನೆರವಿನಿಂದ ನಡೆಯುವ ಅನ್ನದಾಸೋಹಕಾರ್ಯಕ್ರಮದಲ್ಲಿ ದಾನಿಗಳು ತಮ್ಮ ವಿಶೇಷ ದಿನಗಳನ್ನು ಹಸಿದವರಿಗೆ ಆಹಾರ ನೀಡುವ ಮೂಲಕ ಆಚರಿಸುವುದು ಕಾರ್ಯಕ್ರಮದ ಹೆಮ್ಮೆಯ ಸಂಗತಿಯಾಗಿದೆ.

ಇಂದು(ಜೂ06) ಸಮಾಜ ಸೇವಕರಾದ ರಮೇಶ್ ತಮ್ಮ ಹುಟ್ಟುಹಬ್ಬವನ್ನು ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ತಮ್ಮ ವಿಶೇಷ ದಿನವನ್ನು ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ಕೆಲವು ವರ್ಷಗಳಿಂದ ಮಲ್ಲೇಶ್ ಪರಿಚಯವಿದ್ದು ಅವರು ಮಾಡುವ ನಿರಂತರ ಅನ್ನದಾಸೋಹ ಸೇವೆಯಲ್ಲಿ ನಾವು ಜೊತೆಗೂಡಿ ನಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ದಾನಿಗಳ ಅವಶ್ಯಕತೆ ಇದೆ. ಇಚ್ಛೆಯುಳ್ಳ ದಾನಿಗಳು ಅನ್ನದಾಸೋಹ ಸಮಿತಿಯೊಂದಿಗೆ ತಮ್ಮ ವಿಶೇಷ ದಿನಗಳನ್ನು ಆಚರಿಸುವ ಮೂಲಕ ಸೇವೆ ಮಾಡುವುದರ ಜೊತೆಗೆ ಸಂಭ್ರಮಿಸಬಹುದಾಗಿದೆ ಎಂದರು.
ಕಾರ್ಯಕ್ರಮದ ಆಯೋಜಕ ಅನ್ನದಾಸೋಹಿ ಮಲ್ಲೇಶ್ ಮಾತನಾಡಿ ನಿರಂತರವಾಗಿ ಅನ್ನದಾಸೋಹ ಕಾರ್ಯಕ್ರಮಕ್ಕೆ ತಮ್ಮ ಸೇವೆಯನ್ನು ಸಲ್ಲಿಸುತ್ತಿರುವ ರಮೇಶ್ ಅವರಿಗೆ ಹುಟ್ಟು ಹಬ್ಬದ ದಿನದಂದು ಶುಭ ಕೋರುತ್ತೇನೆ. ಯಾವುದೇ ಅಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುವ ಮನಸ್ಸುಗಳಿಗೆ ಇದು ಉತ್ತಮ ವೇದಿಕೆಯಾಗಿದೆ . ಹಸಿದವರಿಗೆ ಊಟ ನೀಡುವ ಮೂಲಕ , ಬಡ ಶಾಲಾ ಮಕ್ಕಳಿಗೆ ಪುಸ್ತಕ ಸೇರಿದಂತೆ ವಿದ್ಯಾಭ್ಯಾಸಕ್ಕೆ ಬೇಕಾಗುವ ಪರಿಕರಗಳನ್ನು ಒದಗಿಸುವ ಮೂಲಕ ದಾನಿಗಳು ತಮ್ಮ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಬಹುದಾಗಿದೆ. ತಮ್ಮ ವಿಶೇಷ ದಿನಗಳನ್ನು ನಮ್ಮೊಂದಿಗೆ ಆಚರಿಸಿ ಎಂದು ದಾನಿಗಳಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಅನ್ನ ದಾಸೋಹ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
