ದೊಡ್ಡಬಳ್ಳಾಪುರ : ದೇಶ ಕಂಡ ಅಪ್ರತಿಮ ನಾಯಕ, ಹಸಿರು ಕ್ರಾಂತಿ ಹರಿಕಾರ ಮಾಜಿ ಉಪಪ್ರಧಾನಿಗಳಾದ ಡಾ.ಬಾಬು ಜಗಜೀವನ್ ರಾಂ ದಲಿತ ಸಮುದಾಯಕಷ್ಟೇ ಅಲ್ಲದೆ ದುಡಿಯುವ ಪ್ರತಿ ವರ್ಗಕ್ಕೂ ಬೆಂಬಲವಾಗಿ ನಿಂತಿದ್ದ ವ್ಯಕ್ತಿತ್ವ ಅವರದು. ಅವರ ಹೋರಾಟದ ಜೀವನ ಶೈಲಿಯೇ ನಮ್ಮೆಲ್ಲರಿಗೂ ಸ್ಪೂರ್ತಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ದೊಡ್ಡಬಳ್ಳಾಪುರ ತಾಲ್ಲೂಕು ಸಂಚಾಲಕರಾದ ರಾಮಮೂರ್ತಿ ( ರಾಮು ನೇರಳೆಘಟ್ಟ) ತಿಳಿಸಿದರು.

ಡಾ. ಬಾಬು ಜಗಜೀವನ್ ರಾಮ್ ಅವರ 38ನೇ ಪುಣ್ಯಸ್ಮರಣೆ ಅಂಗವಾಗಿ ನಗರದ ಹಳೇ ಬಸ್ ನಿಲ್ದಾಣದ ಸಮೀಪವಿರುವ ಡಾ. ಬಾಬು ಜಗಜೀವನ್ ರಾಮ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಸಾಮಾಜಿಕ ಬದುಕಿನಲ್ಲಿ ನ್ಯಾಯ ಪಡೆಯಲು ಹೋರಾಟದಿಂದ ಮಾತ್ರ ಸಾಧ್ಯ, ಹೋರಾಟವನ್ನೇ ಬದುಕಾಗಿ ಆಯ್ಕೆ ಮಾಡಿಕೊಂಡ ರಾಷ್ಟ್ರ ನಾಯಕರು ಡಾ. ಬಾಬು ಜಗಜೀವನ್ ರಾಮ್ ದೇಶಕ್ಕೆ ಅವರ ಸೇವೆ ಮರೆಯಲು ಅಸಾಧ್ಯ ದಲಿತರ ಧ್ವನಿಯಾಗಿ ದಲಿತರ ಅಭಿವೃದ್ಧಿಗೆ ಶ್ರಮಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಇಂದು ಅವರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ದೇಶದ ಉಪ ಪ್ರಧಾನಿಗಳಾಗಿ ಸೇವೆ ಸಲ್ಲಿಸಿರುವ ಅವರು ನಿಷ್ಪಕ್ಷಪಾತವಾಗಿ ಸೇವೆ ಮಾಡುವ ಮುಖಾಂತರ ದೇಶದ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ನವೀನ್, ತಾಲೂಕು ಸಂಘಟನಾ ಸಂಚಾಲಕ ಎಂ.ಕೆ.ನರೇಂದ್ರಮೂರ್ತಿ, ಜಿಲ್ಲಾ ಸಂಘಟನಾ ಸಂಚಾಲಕ ಎಂ.ಪಿ.ಗಂಗಾಧರ್, ತಾಲೂಕು ಸಂಘಟನಾ ಕಾರ್ಯದರ್ಶಿಗಳಾದ ಬಿ.ಹನುಮಯ್ಯ, ಸೆಂದಿಲ್, ಮಹಾದೇವ, ನಗರ ಅಧ್ಯಕ್ಷರಾದ ಶಿವಶಂಕರ್ , ತಾಲೂಕು ಕಾರ್ಯಕಾರಿ ಸಮಿತಿಯ ರವಿಕುಮಾರ್, ಹನುಮೇಗೌಡ ಸೇರಿದಂತೆ ಕರ್ನಾಟಕ ದಲಿತ ಸಂಘರ್ಘ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.
