
ದೊಡ್ಡಬಳ್ಳಾಪುರ : ಅನೇಕ ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿಯು ದೊಡ್ಡಬಳ್ಳಾಪುರಕ್ಕೆ ಬರಬೇಕೆಂದು ತಾಲೂಕು ದಂಡಾಧಿಕಾರಿಗಳಿಂದ ಹಿಡಿದು ಜಿಲ್ಲಾಧಿಕಾರಿಯವರೆಗೂ ಮೌಖಿಕವಾಗಿಯೂ, ಬರವಣಿಗೆ ಮುಖಾಂತರ ಕೂಡ ಕೇಳಿಕೊಂಡರು ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತ ಹೋರಾಟಗಾರ ವಸಂತ್ ಕುಮಾರ್ ತಿಳಿಸಿದರು
ಸೋಮವಾರ ನಗರ ಭಾಗದ ಪ್ರವಾಸಿ ಮಂದಿರದಲ್ಲಿ ಆರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ನೆಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ನೂರಾರು ಕಾರ್ಖಾನೆಗಳಿದ್ದು ಸಾವಿರಾರು ಜನರು ಕೆಲಸ ಮಾಡುತ್ತಿದ್ದಾರೆ ಅತಿ ಹೆಚ್ಚು ಕಲುಷಿತಗೊಂಡಿರುವ ನದಿಗಳ ಸಾಲಿನಲ್ಲಿ ನಮ್ಮ ಅರ್ಕಾವತಿ ನದಿ ರಾಜ್ಯದಲ್ಲಿ ಕಲುಷಿತಗೊಂಡಿರುವ ನದಿಗಳ ಪಟ್ಟಿಯಲ್ಲಿ ಪ್ರಥಮವಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣ ಕಾರ್ಖಾನೆಗಳು, ಸ್ಥಳೀಯ ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯಾಗಿದೆ ಎಂದು ಆರೋಪಿಸಿದರು.
ಈ ಸಮಸ್ಯೆಗಳಿಗೆ ಕಡಿವಾಣ ಹಾಕಲು ಸ್ಥಳೀಯವಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅವಶ್ಯಕತೆ ಇದೆ ಎಂದರು.
ಮಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾಸಗಿ ಕಾರ್ಖಾನೆಯು ಚಿಕ್ಕ ತುಮಕೂರು ಕೆರೆಗೆ ಸಂಬಂಧಪಟ್ಟಂತ ಬಫರ್ ಜೊನ್ ನಲ್ಲಿ ಮಣ್ಣು ಸುರಿಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ದೂರು ನೀಡಿದ್ದು ಸದರಿ ದೂರಿನ ಅನ್ವಯ ಅಧಿಕಾರಿಗಳು ಸಂಬಂಧಪಟ್ಟ ಕಾರ್ಖಾನೆಗೆ ನೋಟಿಸ್ ಸಹ ನೀಡುತ್ತಾರೆ ಆದರೂ ಮಣ್ಣು ತೆಗೆಯುವ ಕಾರ್ಯಕ್ಕೆ ಕಾರ್ಖಾನೆ ಸಿಬ್ಬಂದಿ ಇನ್ನು ಮುಂದಾಗಿಲ್ಲ ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು.
ದೊಡ್ಡತುಮಕೂರು ಗ್ರಾಮ ಪಂಚಾಯಿತಿ ಮತ್ತು ಮಜರಾ ಹೊಸಹಳ್ಳಿ ಪಂಚಾಯಿತಿಗೆ ಜಕ್ಕಲ ಮಡಗು ನೀರು ನೀಡಬೇಕೆಂದು ಜಿಲ್ಲಾಧಿಕಾರಿಗಳು ಮತ್ತು ಉಸ್ತುವಾರಿ ಸಚಿವರು ಆದೇಶ ಮಾಡಿದ್ದರು ಗ್ರಾಮಗಳಿಗೆ ಸರಿಯಾಗಿ ನೀರಿನ ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿದರು.
ಮುಂದಿನ ಏಳು ದಿನಗಳ ಒಳಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ ಜುಲೈ 22ನೇ ಸೋಮವಾರದಿಂದ ಜಿಲ್ಲಾ ಕಚೇರಿ ಎದುರು ರೈತರು ಹಾಗೂ ಗ್ರಾಮಸ್ಥರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಲಿದ್ದೇವೆ ಎಂದು ಎಚ್ಚರಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ರಮೇಶ್, ಕಾಳೇಗೌಡ,ಮುನಿಕೃಷ್ಣಪ್ಪ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿರಿದ್ದರು.