ಬೆಂಗಳೂರು ಗ್ರಾಮಾಂತರ ಜಿಲ್ಲೆ (ವಿಜಯಮಿತ್ರ): ರಾಜ್ಯದ ಖಾಸಗಿ ಕೈಗಾರಿಕೆಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ನೀಡುವ ಸಂಬಂಧ ವಿಧೇಯಕ ತಡೆ ಹಿಡಿದಿರುವ ರಾಜ್ಯ ಸರಕಾರದ ಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಖಂಡಿಸುತ್ತದೆ. ಈ ಕುರಿತು ರಾಜ್ಯ ಸರ್ಕಾರವು ಕನ್ನಡಿಗರ ಪರ ನ್ಯಾಯ ಸಮ್ಮತವಾದ ನಿರ್ಧಾರ ಕೈಗೊಳ್ಳದೆ ಇದ್ದ ಪಕ್ಷದಲ್ಲಿ ಉಗ್ರ ಹೋರಾಟ ಕೈಗೊಳ್ಳುವ ಮೂಲಕ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ತಿಳಿಸಿದ್ದಾರೆ.
ಈ ಸಂಬಂಧ 15 ದಿನಗಳ ಒಳಗೆ ಸಚಿವ ಸಂಪುಟದ ಸಭೆ ನಡೆಸಿ, ಕನ್ನಡಿಗರ ಹಿತಕಾಯುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಪ್ರಕಟಿಸಲು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರು ಕನ್ನಡಿಗರ ಪರವಾಗಿ ಗಡುವು ನೀಡಿದ್ದಾರೆ. ಉತ್ತಮ ನಿರ್ಧಾರ ಕೈಗೊಳ್ಳದೆ ಇದ್ದ ಪಕ್ಷದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.
ಕೆಲ ಕಾರ್ಪೊರೇಟ್ ಕಂಪನಿಗಳ ಒತ್ತಡಕ್ಕೆ ಮಣಿದು ಸರಕಾರವು ವಿಧೇಯಕವನ್ನು ತಡೆಹಿಡಿಯುವ ನಿರ್ಧಾರ ಮಾಡಿದೆ. ಇದನ್ನು ಈ ಕೂಡಲೇ ಪಡೆದು ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ” ಎಂದು ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಆಗ್ರಹಿಸಿದ್ದಾರೆ.
