
ದೊಡ್ಡಬಳ್ಳಾಪುರ : ಹಿನ್ನೆಲೆ ಗಾಯನದಲ್ಲಿ ಭಾರತ ದೇಶದಾದ್ಯಂತ ಪ್ರಸಿದ್ಧಿ ಪಡೆದಿರುವ ಪದ್ಮಶ್ರೀ, ಪದ್ಮ ವಿಭೂಷಣ ಪುರಸ್ಕೃತ ಗಾನಕೋಗಿಲೆ ಕೆ.ಎಸ್. ಚಿತ್ರಮ್ಮನವರ 61ನೇ ಹುಟ್ಟು ಹಬ್ಬವನ್ನು ವೀರ ಅಭಿಮಾನಿ ಮುಕ್ಕೆನಹಳ್ಳಿ ರವಿ ನೇತೃತ್ವದಲ್ಲಿ ಅನ್ನದಾಸೋಹ ಮಾಡುವ ಮೂಲಕ ಆಚರಿಸಲಾಯಿತು.
ತಾಲ್ಲೂಕಿನ ದರ್ಗಾ ಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅನ್ನದಾಸೋಹ ಸಮಿತಿಯ ಸಹಕಾರದೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ )ದ ವತಿಯಿಂದ ನಿರಾಶ್ರಿತ ಕಡುಬಡವರಿಗೆ ಆಹಾರ ವಿತರಣೆ, ವೃದ್ಧರಿಗೆ ಹೊದಿಕೆ ವಿತರಣೆ ಹಾಗೂ ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ಕೆಎಸ್ ಚಿತ್ರಮ್ಮರವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಮಾಜಿ ನಗರಸಭಾ ಸದಸ್ಯ ಪಿ. ಸಿ. ಲಕ್ಷ್ಮೀನಾರಾಯಣ್ ಮಾತನಾಡಿ ಕೊರೋನ ಸಂದರ್ಭದಲ್ಲಿ ಮಿತ್ರರ ಸಲಹೆ ಮೇರೆಗೆ ಅನ್ನದಾಸೋಹ ಸಮಿತಿಯೊಟ್ಟಿಗೆ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದೆ. ಅಂದಿನಿಂದ ಇಂದಿನವರೆಗೂ ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು ಅನ್ನ ದಾಸೋಹಕ್ಕೆ ಸಹಾಯ ನೀಡುತ್ತಿದ್ದು ಮುಂದೆಯೂ ಇದೇ ರೀತಿ ಸಹಕಾರ ನೀಡಲಾಗುವುದು ಎಂದರು.
ಈ ಕಾರ್ಯಕ್ರಮಕ್ಕೆ ಧನಸಹಾಯ ಮಾಡುವುದು ಸುಲಭ ಆದರೆ ಅದನ್ನು ಸಮರ್ಪಕವಾಗಿ ಪ್ರತಿಯೊಬ್ಬರಿಗೂ ಹಂಚಿಕೆಯಾಗುವ ರೀತಿಯಲ್ಲಿ ಕಾರ್ಯಕ್ರಮ ರೂಪಿಸುವುದು ಅತ್ಯಂತ ಕಷ್ಟಕರ ಸಂಗತಿಯಾಗಿದೆ ಅಂತಹ ಕಾರ್ಯವನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಮಲ್ಲೇಶ್ ನೆಡೆಸಿಕೊಂಡು ಬರುತ್ತಿದ್ದಾರೆ ಅವರಿಗೆ ಶುಭವಾಗಲಿ ಎಂದು ಹಾರೈಸಿದರು
ಕರ್ನಾಟಕ ರಕ್ಷಣಾ ವೇದಿಕೆಯ( ಪ್ರವೀಣ್ ಕುಮಾರ್ ಶೆಟ್ಟಿ ಬಣ ) ತಾಲ್ಲೂಕು ಘಟಕ ಅಧ್ಯಕ್ಷರಾದ ಹಮಾಮ್ ವೆಂಕಟೇಶ್ ಮಾತನಾಡಿ ಇಂದಿನ ಕಾರ್ಯಕ್ರಮ ತುಂಬಾ ವಿಶೇಷವಾಗಿದ್ದು ಸುಮಾರು 21 ಭಾಷೆಗಳಲ್ಲಿ 25,000ಕ್ಕೂ ಅಧಿಕ ಹಾಡುಗಳನ್ನು ಹಾಡಿ ಗಾನಕೋಗಿಲೆ ಎಂದು ಹೆಸರುವಾಸಿ ಪಡೆದಿರುವ ಶ್ರೀಮತಿ ಕೆ ಎಸ್ ಚಿತ್ರಮ್ಮನವರ 61ನೇ ಹುಟ್ಟು ಹಬ್ಬದ ಆಚರಣೆಯನ್ನು ಅನ್ನದಾಸೋಹ ಸಮಿತಿಯೊಟ್ಟಿಗೆ ಆಹಾರ ವಿತರಣೆ,ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳ ವಿತರಣೆ ಹಾಗೂ ವೃದ್ಧರಿಗೆ ಹೊದಿಕೆ ವಿತರಣೆ ಮಾಡುವ ಮೂಲಕ ಆಚರಿಸುತ್ತಿರುವುದು ಸಂತಸ ತಂದಿದೆ.
ಕಾರ್ಯಕ್ರಮವನ್ನು ಕೆ ಎಸ್ ಚಿತ್ರಮ್ಮನವರ ವೀರಾಭಿಮಾನಿ ಮುಕ್ಕೇನ ಹಳ್ಳಿ ರವಿಯವರ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿದ್ದು. ಇದೊಂದು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಾರ್ಯಕ್ರಮವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಕ್ಕೇನಹಳ್ಳಿ ರವಿ ಮಾತನಾಡಿ ಕೆ ಎಸ್ ಚಿತ್ರಮ್ಮನವರ 61ನೇ ಹುಟ್ಟು ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದ್ದೇವೆ. ಸತತವಾಗಿ ಕಳೆದ ಹಲವು ವರ್ಷಗಳಿಂದ ಅನ್ನದಾಸೋಹಿ ಮಲ್ಲೇಶ್ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿರಾಶ್ರಿತ ಕಡುಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ಶಾಲಾ ಮಕ್ಕಳಿಗೆ ಹಾಗೂ ವೃದ್ಧರಿಗೆ ಅವಶ್ಯಕತೆ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಆಚರಣೆ ಮಾಡುತ್ತಿದ್ದು ಮುಂದೆಯೂ ಈ ಕಾರ್ಯಕ್ರಮವು ನಡೆಯಲಿದೆ ಎಂದರು.
ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಇಂದು ಸಂಗೀತ ಲೋಕದಲ್ಲಿ ಮಿನುಗು ತಾರೆಯಂತೆ ಮಿಂಚುತ್ತಿರುವ ಅದ್ಭುತ ಗಾಯಕಿ, ಗಾನಕೋಗಿಲೆ ಎಂದೇ ಪ್ರಸಿದ್ಧಿ ಪಡೆದಿರುವ ಪದ್ಮಶ್ರೀ ಪದ್ಮಭೂಷಣ ಕೆಎಸ್ ಚಿತ್ರಮ್ಮನವರ 61ನೇ ಹುಟ್ಟು ಹಬ್ಬವನ್ನು ಅವರ ವೀರ ಅಭಿಮಾನಿ ಮುಕ್ಕೆನಹಳ್ಳಿ ರವಿ ಅವರ ನೇತೃತ್ವದಲ್ಲಿ ವಿಶೇಷವಾಗಿ ಆಚರಿಸಿದ್ದೇವೆ. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ನಟ ಅಥವಾ ನಟಿಯರ ಹುಟ್ಟು ಹಬ್ಬಗಳಲ್ಲಿ ದುಂದು ವೆಚ್ಚ ಮಾಡುವ ಮೂಲಕ ಸಂಭ್ರಮಿಸುತ್ತಾರೆ ಆದರೆ ಪ್ರತಿಯೊಬ್ಬ ಅಭಿಮಾನಿಯೂ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕ ನಟರಿಗೆ ಅಥವಾ ನಟಿಯರಿಗೆ ಗೌರವ ಸಲ್ಲಿಸಬೇಕಿದೆ ಅದಕ್ಕೆ ಉತ್ತಮ ಉದಾಹರಣೆ ಇಂದಿನ ಕಾರ್ಯಕ್ರಮವಾಗಿದೆ ಶ್ರೀಯುತ ರವಿಯವರು ತಮ್ಮ ನೆಚ್ಚಿನ ಗಾಯಕರಾದ ಕೆ ಎಸ್ ಚಿತ್ರಮ್ಮನವರ ಹುಟ್ಟು ಹಬ್ಬದ ಆಚರಣೆಯನ್ನು ನಿರಾಶ್ರಿತ ಕಡುಬಡವರಿಗೆ ಆಹಾರ ವಿತರಣೆ ಜೊತೆಗೆ ವೃದ್ಧರಿಗೆ, ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳ ವಿತರಣೆ ಮಾಡಿದ್ದಾರೆ ಇದು ಸಮಾಜಕ್ಕೆ ಉತ್ತಮ ಮಾದರಿಯಾಗಿದೆ. ಅಭಿಮಾನಿಗಳು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಲಿ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ( ಪ್ರವೀಣ್ ಕುಮಾರ್ ಶೆಟ್ಟಿ ಬಣ ) ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್ ಎಲ್ ಎನ್ ವೇಣು,ತಾಲ್ಲೂಕು ಉಪಾಧ್ಯಕ್ಷ ಜೋಗಳ್ಳಿ ಅಮ್ಮು, ಕಾರ್ಯದರ್ಶಿ ಕಾರಳ್ಳಿ ಮಂಜು, ಮುಖಂಡರಾದ ಸೂರಿ, ಶಿವು, ರಂಗ, ಸೇರಿದಂತೆ ಹಲವು ಮುಖಂಡರು ಉಪಸ್ಥಿರಿದರು.