
ದೊಡ್ಡಬಳ್ಳಾಪುರ ಅ.1 ( ವಿಜಯಮಿತ್ರ ): ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಆತ್ರೇಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ಕೊಡಿಗೇಹಳ್ಳಿಯಲ್ಲಿ ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಗಳು ದೀಪ ಬೆಳಗುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಡ್ಯಾಪ್ಕೂ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ. ನಾಗೇಶ್ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯ ಆಚರಣೆಯನ್ನು ಕುರಿತು ಪ್ರಾಸ್ತಾವಿಕ ಭಾಷಣ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಸುನೀಲ್ ಕುಮಾರ್ ಮಾತನಾಡಿ ರಕ್ತದಾನದ ಮಹತ್ವವನ್ನು ಸಾರ್ವಜನಿಕರು ಅರಿಯಬೇಕಿದೆ, ರಕ್ತದಾನದ ಮಾಡುವ ಮೂಲಕ ಮತ್ತೊಬ್ಬರ ಜೀವ ರಕ್ಷಣೆ ಮಾಡಬಹುದಾಗಿದೆ. ಆರೋಗ್ಯವಂತರು ಯಾವುದೇ ಅಂಜಿಕೆ ಇಲ್ಲದೆ ರಕ್ತದಾನ ಮಾಡಬಹುದಾಗಿದೆ . ನಿಮ್ಮ ದಾನವು ವ್ಯರ್ಥವಾಗದೆ ಮತ್ತೊಬ್ಬರ ಜೀವ ಉಳಿಸಲು ಸಹಾಯಕಾರಿಯಾಗುತ್ತದೆ . ಈಗಿನ ಯುವ ಪೀಳಿಗೆ ಸ್ವಯಂ ಪ್ರೇರಿತ ರಕ್ತದಾನ ಮಾಡಲು ಮುಂದಾಗ ಬೇಕಿದೆ ಎಂದರು.
ಡಾ. ಶಾರದ ನಾಗನಾಥ್ ಮತ್ತು ಡಾ. ನಿರಂಜನ್ ಇವರು ಸಹ ರಕ್ತದಾನ ದಿನಾಚರಣೆ ಮತ್ತು ಅದರ ಮಹತ್ವದ ಬಗ್ಗೆ ಮಾತನಾಡಿದರು. ಆತ್ರೇಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ರಘುನಾಥ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ವೈದ್ಯರು ಸಾರ್ವಜನಿಕರಿಗೆ ರಕ್ತದಾನ ಕುರಿತು ಅರಿವು ಮೂಡಿಸುವ ಅಗತ್ಯತೆಯಿದೆ. ರಕ್ತದಾನ ಎಂದರೆ ಹೆದರುವ ನೂರಾರು ಜನರಿಗೆ ವೈದ್ಯರ ಸೂಕ್ತ ಸಲಹೆ ದೈರ್ಯ ತುಂಬುತ್ತದೆ . ತುರ್ತು ಸಂದರ್ಭಗಳಲ್ಲಿ ರೋಗಿಯ ಜೀವ ಉಳಿಸಲು ರಕ್ತದಾನದ ಮೂಲಕ ಶೇಖರಿಸಲ್ಪಟ್ಟ ರಕ್ತ ಸಹಕಾರಿಯಾಗಿದೆ. ಈ ದಿನದ ವಿಶೇಷತೆಯನ್ನು ಪ್ರತಿ ಯುವಕ ಯುವತಿಯೂ ಅರಿತು ರಕ್ತದಾನಕ್ಕೆ ಮುಂದಾಗುವ ಮೂಲಕ ಮತ್ತೊಬ್ಬರ ಜೀವ ರಕ್ಷಿಸಲು ಸಹಕರಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಶ್ರೀಮತಿ ಇಂದಿರಾ, ಆಶಾ ಕಾರ್ಯಕರ್ತೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕನಸವಾಡಿ , ಶ್ರೀ ಜಯ್ ಶಂಕರ್, ಶ್ರೀ ಕಿರಣ್ ರನ್ನು ವೇದಿಕೆ ಮೇಲಿನ ಗಣ್ಯವ್ಯಕ್ತಿಗಳು ಸನ್ಮಾನಿಸಿದರು.
ಕಾರ್ಯಕ್ರಮದ ಅಂಗವಾಗಿ ದಿನಾಂಕ 27-09-2024ರಂದು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಡಿ.ಬಿ. ಪುರ ಇಲ್ಲಿ ರಕ್ತದಾನದ ಮಹತ್ವದ ಬಗ್ಗೆ ಆಯೋಜಿಸಿದ್ದ ಚರ್ಚಾ ಸ್ಪರ್ಧೆಯಲ್ಲಿ ಮೊದಲ, ಎರಡನೇ ಮತ್ತು ಮೂರನೇ ಬಹುಮಾನ ಪಡೆದ ಅಭ್ಯರ್ಥಿಗಳಿಗೆ ನಗದು ಬಹುಮಾನ, ಪದಕ, ಪಾರಿತೋಷಕ ಮತ್ತು ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು 45 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.ಈ ಕಾರ್ಯಕ್ರಮದಲ್ಲಿ ಕೆ.ಸಿ. ಜನರಲ್ ಸರ್ಕಾರಿ ಆಸ್ಪತ್ರೆ ರಕ್ತನಿಧಿ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ. ಸುನೀಲ್ ಕುಮಾರ್ ಎಂ.ಸಿ. ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಡಾ. ನಾಗೇಶ್ ಎಸ್, ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು, ಡ್ಯಾಪ್ಕೂ ಘಟಕ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಡಾ. ಶಾರದ ನಾಗನಾಥ್, ತಾಲ್ಲೂಕು ಆರೋಗ್ಯ ಅಧಿಕಾರಿಗಳು, ದೊಡ್ಡಬಳ್ಳಾಪುರ ತಾಲ್ಲೂಕು, ಡಾ. ನಿರಂಜನ್, ಫಿಜೀಶಿಯನ್, ಸಾರ್ವಜನಿಕ ಆಸ್ಪತ್ರೆ ದೊಡ್ಡಬಳ್ಳಾಪುರ, ಡಾ. ರಘುನಾಥ್, ಪ್ರಾಂಶುಪಾಲರು, ಆತ್ರೇಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಡಾ. ಲಾಡ್, ಮುಖ್ಯಸ್ಥರು, ಆತ್ರೇಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಶ್ರೀ, ರಾಜೇಂದ್ರ, ಪ್ರಯೋಗ ಶಾಲಾ ತಂತ್ರಜ್ಞ ಅಧಿಕಾರಿ, ಸಾರ್ವಜನಿಕ ಆಸ್ಪತ್ರೆ ದೊಡ್ಡಬಳ್ಳಾಪುರ, ಶ್ರೀ ರವಿಕುಮಾರ್ ಎಂ ಮತ್ತು ಇ ಸಹಾಯಕರು, ಡ್ಯಾಪ್ಕೂ ಘಟಕ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಕಾಲೇಜಿನ ಅಧಿಕಾರಿ ಮತ್ತು ಡ್ಯಾಪ್ಕೂ ಸಿಬ್ಬಂದಿಗಳು ಭಾಗವಹಿಸಿದ್ದರು.