
ದೊಡ್ಡಬಳ್ಳಾಪುರ: ತಾಲ್ಲೂಕಿನ ತೂಬಗೆರೆ ಹೋಬಳಿಯ ಹಾಡೋನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ವಿಜಯದಶಮಿ ಪ್ರಯುಕ್ತ ಆಯೋಜಿಸಿದ್ದ ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣ ಸಂಧಾನ ಎಂಬ ಪೌರಾಣಿಕ ನಾಟಕ ಶನಿವಾರ ರಾತ್ರಿ ನಡೆಯಿತು.
ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜು ಮಾತನಾಡಿ, ಪ್ರಸ್ತುತ ಬದಲಾದ ಪರಿಸ್ಥಿತಿಯಲ್ಲೂ ಕಲಾವಿದರು ನಾಟಕದ ಪರಂಪರೆಯನ್ನು ಬಿಡದೆ, ನಾಟಕ ಕಲಿತು ಪ್ರದರ್ಶನ ಮಾಡುವ ಮೂಲಕ ರಂಗ ಕಲೆಯನ್ನು ಇನ್ನು ಜೀವಂತವಾಗಿಟ್ಟುಕೊಂಡು ಬಂದಿದ್ದಾರೆ ರಂಗಕಲೆ ನಮ್ಮ ಗ್ರಾಮೀಣ ಬದುಕಿನ ಮೂಲಸೆಲೆ. ನಾಟಕಗಳು ರೈತಾಪಿ ಜನರ ಮನೋರಂಜನೆಯ ವೇದಿಕೆಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾಟಕ ರಾತ್ರಿ 9 ರಿಂದ ಮುಂಜಾನೆವರೆಗೂ ನಡೆಯಿತು. ಗ್ರಾಮಸ್ಥರು ದಸರಾ ಹಬ್ಬದಂದು ನಾಟಕವನ್ನು ಕಣ್ತುಂಬಿಕೊಂಡರು. ನಾಟಕದ ಎಲ್ಲ ಪಾತ್ರಧಾರಿಗಳು ಉತ್ತಮ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ನಾರಾಯಣಪ್ಪ ಹೋಬಳಿ ಜೆಡಿಎಸ್ ಕಾರ್ಯದರ್ಶಿ ಅಶೋಕ್, ಹಾಡೋನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಮುನೇಗೌಡ, ಯುವ ಮುಖಂಡ ಉದಯ ಆರಾಧ್ಯ, ಕನ್ನಡ ಪಕ್ಷದ ಅಧ್ಯಕ್ಷರಾದ ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.