
ದೊಡ್ಡಬಳ್ಳಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ತಾಲ್ಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶವನ್ನು ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜನೆ ಮಾಡಲಾಗಿತ್ತು.
ಕ್ಷೇತ್ರ ಯೋಜನಾಧಿಕಾರಿಗಳಾದ ಸುಧಾ ಭಾಸ್ಕರ್ ನಾಯಕ್ ಕಾರ್ಯಕ್ರಮ ಕುರಿತು ಪ್ರಸ್ತಾವಿಕ ಮಾತನಾಡುವ ಮೂಲಕ ಯೋಜನೆಯಿಂದ ರಾಜ್ಯದಾದ್ಯಂತ ಜನತೆ ಪಡೆದುಕೊಂಡಿರುವ ಉಪಯೋಗವನ್ನು ಹಾಗೂ ಯೋಜನೆಯಿಂದ ಮಹಿಳೆಯರು ಸ್ವಾವಲಂಬಿಗಳಾಗಿ ಹೇಗೆ ಜೀವನ ಸಾಗಿಸುತ್ತಾರೆ ಎಂಬುದನ್ನು ಸಭಿಕರಿಗೆ ತಿಳಿಸಿದರು.
ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪ್ರೊ ರವಿಕಿರಣ್ ಮಾತನಾಡಿ ಕ್ಷೇತ್ರದಿಂದ ಬರುವ ಅನುದಾನವನ್ನು ಒಕ್ಕೂಟದ ಮೂಲಕ ಸಧಸ್ಯರಿಗೆ ಒದಗಿಸಲು ಒಕ್ಕೂಟದ ಪದಾಧಿಕಾರಿಗಳ ಪಾತ್ರ ಪ್ರಮುಖವಾಗಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಹತ್ತು ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿದೆ ಪ್ರತಿ ಹಳ್ಳಿ ಹಳ್ಳಿಗಳಿಗೂ ಯೋಜನೆಯ ಸೇವೆ ಲಭಿಸುತ್ತಿದ್ದು ವೀರೇಂದ್ರ ಹೆಗ್ಗಡೆಯವರ ಪಾತ್ರ ಶ್ಲಾಘನೀಯ ಎಂದರು.
ಯೋಜನೆಯ ಜಿಲ್ಲಾ ನಿರ್ದೇಶಕ ಉಮರಬ್ಬ ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ,ನಾಯಕತ್ವ ಗುಣ, ಸಹಕಾರ ಮನೋಭಾವನೆ ಬಗ್ಗೆ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಯೋಜನೆಯಿಂದ ಕೇವಲ ಆರ್ಥಿಕ ನೆರವು ಅಷ್ಟೇ ಅಲ್ಲದೆ, ಪ್ರತಿಯೊಬ್ಬರು ತಮ್ಮದೇ ರೀತಿಯ ಸಮಾಜಕ್ಕೆ ಪೂರಕವಾದಂತ ಕಾರ್ಯಗಳಲ್ಲಿ ತೊಡಗಿಸುವ ಕಾರ್ಯಕ್ರಮ ಯೋಜನೆಯಿಂದ ಆಗುತ್ತಿದೆ. ಈ ಮೂಲಕ ಪ್ರತಿಯೊಬ್ಬರು ವಿಶೇಷ ರೀತಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ. ಸಂಘದ ಪದಾಧಿಕಾರಿಗಳಿಂದ ಸಮಾಜಕ್ಕೆ ಮತ್ತಷ್ಟು ಉತ್ತಮ ಕಾರ್ಯಗಳು ದೊರೆಯುವಂತಾಗಲಿ ಎಂದರು.
ಸಿರಿ ಮಾರಾಟ ಮಳಿಗೆ ಮತ್ತು ಸಿ.ಎಸ್.ಸಿ ಮಾಹಿತಿ ಕೇಂದ್ರಗಳು ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ವಿಶೇಷವಾಗಿ ಆಕರ್ಷಿಸಿದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ H.S ನಾಗೇಶ್ ಮಾತನಾಡಿ ಇದೊಂದು ಉತ್ತಮ ಕಾರ್ಯಕ್ರಮ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ ಸಾರ್ವಜನಿಕರ ಜೇವನೋಪಾಯಕ್ಕೆ ಮಾರ್ಗವಾಗಿದೆ, ಗ್ರಾಮೀಣ ಜನತೆಗೆ ಉದ್ಯೋಗವಕಾಶ ಕಲ್ಪಿಸುವ ಮೂಲಕ ಗುಡಿ ಕೈಗಾರಿಕೆ, ಹಾಗೂ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಯೋಜನೆ ಮಧ್ಯಮ ವರ್ಗದ ಜನರಲ್ಲಿ ನೂತನ ಹುಮ್ಮಸ್ಸನ್ನು ಮೂಡಿಸಿದೆ ಎಂದರೆ ತಪ್ಪಾಗಲಾರದು, ಯೋಜನೆಯ ಸೇವಾ ವ್ಯಾಪ್ತಿಯು ಮತ್ತಷ್ಟು ಬೆಳೆಯಲಿ , ಸಾರ್ವಜನಿಕರಿಗೆ ಉತ್ತಮ ಅವಕಾಶಗಳು ದೊರೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡ ಸಹಾಯಕ ಪ್ರಬಂಧಕರಾದ ಮಧುಸೂದನ್, ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ತಾಲೂಕಿನ 9 ವಲಯಗಳ ಒಕ್ಕೂಟದ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ,CSC ಸೇವಾದಾರರು, ಕಛೇರಿ ಸಿಬ್ಬಂದಿಗಳು ಹಾಜರಿದ್ದರು.