ಯಲಹಂಕ : ನಕಲಿ ಜಮೀನು ಪತ್ರ ಸೃಷ್ಟಿಸಿ ನಮ್ಮ ಭೂಮಿಯನ್ನು ಕಬಳಿಸಿದ್ದಾರೆ ಈ ಕುರಿತು ಪ್ರಶ್ನೆ ಮಾಡಿದ ನಮ್ಮ ಮೇಲೆ ಹಲ್ಲೆ ನೆಡೆಸಿ ಪ್ರಾಣ ಬೆದರಿಕೆ ಹಾಕಿದ್ದಾರೆ, ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆದರೆ ಇಲ್ಲಿಯವರೆಗೂ ಯಾವುದೇ ರೀತಿಯ ಸ್ಪಂದನೆ ಪೊಲೀಸ್ ಇಲಾಖೆಯಿಂದ ಸಿಕ್ಕಿಲ್ಲ, ನಮ್ಮ ಕುಟುಂಬಕ್ಕೆ ರಕ್ಷಣೆ ಹಾಗೂ ನ್ಯಾಯ ಕೊಡಿಸುವಂತೆ ದೂರುದಾರ ಹನಿಯೂರು ಶಾಂತಕುಮಾರ್ ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು ನಮ್ಮ ಹನಿಯೂರು ಗ್ರಾಮದ ಸರ್ವೇ ನಂಬರ್ 84/16ರಲ್ಲಿ 0-08 ಗುಂಟೆ ಜಮೀನಿದ್ದು, ವಿಜಿಕುಮಾರ್ ಬಿನ್ ಸೀತಾರಾಮಯ್ಯ ಮತ್ತು ಆತನ ಹೆಂಡತಿ ವೆಂಕಮ್ಮ ಮತ್ತು ಈತನ(ವಿಜಿಕುಮಾರ್ )ಅತ್ತೆ ಗೊಪಮ್ಮ ರವರ ಹೆಸರಿಗೆ ಶುದ್ಧ ಕ್ರಯ ಮಾಡಿಸಿಕೊಂಡಿದ್ದಾರೆ ಎಂದು ಶಾಂತ ಕುಮಾರ್ ಆರೋಪಿಸಿದ್ದಾರೆ,
ಈ ಕುರಿತು ದಿನಾಂಕ 08.10.2024 ರಂದು ಉಪನೊಂದಾಣಿಧಾರಿಗಳಿಗೆ ದೂರನ್ನು ನೀಡಿದ್ದು, ಸದರಿ ದೂರಿನ ಸೇಡನ್ನು ಇಟ್ಟುಕೊಂಡು ಅಂದಿನಿಂದ ನಮಗೆ ವಿಜಿಕುಮಾರ್ ಮತ್ತು ಕುಟುಂಬದವರು ತೊಂದರೆ ಕೊಡುತ್ತಿದ್ದಾರೆ ಎಂದರು, ನಮ್ಮ ವಿರುದ್ಧವೇ ಸುಳ್ಳು ದೂರನ್ನು ಸಹ ನೀಡಿದ್ದಾರೆ, ಇಷ್ಟೇ ಅಲ್ಲದೆ ವಿಜಿಕುಮಾರ್ ಕುಟುಂಬದ ಮಹಿಳೆಯರು ನಮ್ಮ ತೋಟದ ಬಳಿ ಬಂದು ಗಲಾಟೆ ಮಾಡುತ್ತಿದ್ದಾರೆ, ಈ ಮೂಲಕ ನಮ್ಮ ವಿರುದ್ಧವೇ ಪ್ರಕರಣ ದಾಖಲಿಸುವ ಷಡ್ಯಂತ್ರವನ್ನ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಶಾಂತಕುಮಾರ್ ತಾಯಿ ವೀರಮ್ಮ ಮಾತನಾಡಿ, ಜಮೀನಿನ ವಿಚಾರದ ಸೇಡಿನಿಂದ ವಿಜಿಕುಮಾರ್ ಮತ್ತು ಕುಟುಂಬದ ಸದಸ್ಯರು ರಾತ್ರಿ ಸಮಯದಲ್ಲಿ ಮನೆಗೆ ಬಂದು ಗಲಾಟೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿನ್ನನ್ನು ಮತ್ತು ನಿನ್ನ ಮಗನನ್ನು ಸಾಯಿಸುತ್ತೇವೆಂದು ಬೆದರಿಕೆ ಹಾಕಿದ್ದಾರೆ ಮನೆಯಲ್ಲಿ ನೆಮ್ಮದಿಯಿಂದ ಜೀವನ ಸಾಗಿಸಲು ಬಿಡುತ್ತಿಲ್ಲ ಆದ್ದರಿಂದ ವಿಜಿಕುಮಾರ್ ಹಾಗೂ ಸಂಬಂಧಪಟ್ಟವರನ್ನು ಠಾಣೆಗೆ ಕರೆಸಿ ಬುದ್ದಿ ಹೇಳುವ ಮೂಲಕ ಸೂಕ್ತ ಬಂದೋಬಸ್ತ್ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದರು.
