ದೊಡ್ಡಬಳ್ಳಾಪುರ : ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಹಸಿದವರಿಗೆ ಆಹಾರ ವಿತರಿಸುವ ಮೂಲಕ ಶಿವಕುಮಾರ್ ಮತ್ತು ಕುಟುಂಬಸ್ಥರು ಪುಟಾಣಿ ಸುಶ್ವತ್ ರವರ 3ನೇ ವರ್ಷದ ಹುಟ್ಟುಹಬ್ಬದವನ್ನು ಆಚರಿಸಿದರು.

1745 ದಿನಗಳಿಂದಲೂ ನಿರಂತರ ದಾನಿಗಳ ಸಹಾಯದೊಂದಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ಮಲ್ಲೇಶ್ ಮತ್ತು ತಂಡ ನಡೆಸಿಕೊಂಡು ಬರುತ್ತಿದ್ದು, ತಾಲ್ಲೂಕಿನ ಮಲ್ಲತಳ್ಳಿಯ ಶಿವಕುಮಾರ್ ಮತ್ತು ಕುಟುಂಬಸ್ಥರು ಇಂದಿನ( ಜ. 04) ರಂದು ನಿರಾಶ್ರಿತ ಕಡು ಬಡವರಿಗೆ ಆಹಾರ ವಿತರಣೆ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡುವ ಮೂಲಕ ಸಂಭ್ರಮದ ದಿನವನ್ನು ವಿಶೇಷವಾಗಿ ಆಚರಿಸಿದ್ದಾರೆ.

ಈ ಕುರಿತು ದಾನಿಗಳಾದ ಶಿವಕುಮಾರ್ ಮಾತನಾಡಿ ಕೊರೋನ ಸಂದರ್ಭದಲ್ಲಿ ಹಸಿದವರಿಗೆ ಆಹಾರ ನೀಡುವ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ಮಲ್ಲೇಶ್ ಮತ್ತು ತಂಡ ನಿರಂತರ ಸೇವೆಯಲ್ಲಿ ತೊಡಗಿದೆ, ಈ ಬಗ್ಗೆ ಮಾಹಿತಿ ದೊರೆತ ಕ್ಷಣದಿಂದ ನಾವು ನಮ್ಮ ವಿಶೇಷಗಳನ್ನು ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಆಚರಿಸುತ್ತಾ ಬಂದಿದ್ದೇವೆ , ಮುಂದೆಯೂ ಸಹ ನಮ್ಮ ಕುಟುಂಬದ ವಿಶೇಷ ಹಾಗೂ ಸಂಭ್ರಮದ ದಿನಗಳನ್ನು ಸಮಿತಿ ಒಟ್ಟಿಗೆ ಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸಲು ಬಯಸುತ್ತೇವೆ ಎಂದರು.

ದಾನಿಗಳಾದ ಮಂಜುನಾಥ್ ಮಾತನಾಡಿ ಇದೇ ಮೊದಲ ಬಾರಿಗೆ ಅನ್ನ ದಾಸೋಹ ಸಮಿತಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ, ತುಂಬ ಸಂತೋಷವಾಗಿದೆ ಹಸಿದವರಿಗೆ ನಿರಂತರವಾಗಿ ಆಹಾರ ನೀಡುತ್ತಿರುವ ಮಲ್ಲೇಶ್ ಅವರಿಗೆ ಶುಭವಾಗಲಿ, ಇಂದು ನಮ್ಮ ಕುಟುಂಬದ ಕಾರ್ಯಕ್ರಮವನ್ನು ಮಲ್ಲೇಶ್ ಒಟ್ಟಿಗೆ ಆಚರಿಸುತ್ತಿರುವುದು ಸಂತಸ ತಂದಿದೆ, ದುಂದು ವೆಚ್ಚ ಮಾಡುವ ಮೂಲಕ ತಮ್ಮ ವಿಶೇಷ ದಿನಗಳನ್ನು ಆಚರಿಸುವ ಪ್ರತಿಯೊಬ್ಬರು ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಅನ್ನದಾಸೋಹ ಮಾಡುವ ಮುಖಾಂತರ ಆಚರಿಸುವುದು ಸೂಕ್ತ ಎಂದರು.

ಕಾರ್ಯಕ್ರಮದ ಆಯೋಜಕ ಅನ್ನದಾಸೋಹಿ ಮಲ್ಲೇಶ್ ಮಾತನಾಡಿ ನಿರಂತರವಾಗಿ ಕಳೆದ ಮೂರು ವರ್ಷಗಳಿಂದಲೂ ನಮ್ಮೊಟ್ಟಿಗೆ ಬೆಂಬಲವಾಗಿ ನಿಂತಿರುವ ಶಿವಕುಮಾರ್ ಮತ್ತು ಕುಟುಂಬಸ್ಥರಿಗೆ ಅನ್ನದಾಸೋಹ ಸಮಿತಿ ಆಭಾರಿಯಾಗಿದೆ , ತಮ್ಮ ವಿಶೇಷ ದಿನಗಳನ್ನು ಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ, ಶಾಲಾ ಮಕ್ಕಳಿಗೆ ವಿಶೇಷ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ಆಚರಣೆ ಮಾಡಿಕೊಳ್ಳುತ್ತಿರುವ ಶಿವಕುಮಾರ್ ಕುಟುಂಬಸ್ಥರಿಗೆ ಶುಭವಾಗಲಿ, ಮುಂದೆ ಅವರಿಂದ ಮತ್ತಷ್ಟು ಉತ್ತಮ ಸೇವಾ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಲಕ್ಷ್ಮೀ ನರಸಮ್ಮ, ಮಂಜುನಾಥ್ , ಸಂಗೀತ, ಹರೀಶ್, ಶಿವಕುಮಾರ್, ಗಜೇಂದ್ರ, ಶೃತಿ, ಅಪೂರ್ವ, ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

