
ದೊಡ್ಡಬಳ್ಳಾಪುರ : ಜನವರಿ 11ರ ಶನಿವಾರದಂದು ಹಾಡೋನಹಳ್ಳಿ ಗ್ರಾಮದ ರಂಗಮಂದಿರದಲ್ಲಿ ಜೆಡಿಎಸ್ ಹಿರಿಯ ಮುಖಂಡ ದಿವಂಗತ ಹೆಚ್.ಅಪ್ಪಯ್ಯಣ್ಣ ಅವರ ನುಡಿ ನಮನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ, ನುಡಿ ನಮನ ಕಾರ್ಯಕ್ರಮಕ್ಕೆ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಅಭಿಮಾನಿಗಳು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನವ ಕರ್ನಾಟಕ ಯುವ ಶಕ್ತಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಹಳ್ಳಿ ರೈತ ಅಂಬರೀಷ್ ಮನವಿ ಮಾಡಿದ್ದಾರೆ.
ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿ ನಿರಂತರ ಜನಸೇವೆ ಸಲ್ಲಿಸಿದ್ದಾರೆ, ಅಲ್ಲದೇ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಲು ಅವಿರತ ಹೋರಾಟ ನೆಡೆಸಿದ ಅವರ ಅಗಲಿಕೆ ಜೆಡಿಎಸ್ ಪಕ್ಷಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ ಎಂದರು.
ಅವರ ಸೇವೆ ಹಾಗೂ ಒಡನಾಟದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಇದೇ ತಿಂಗಳ ಜನವರಿ 11ರ ಶನಿವಾರದಂದು ಹಾಡೋನಹಳ್ಳಿ ಗ್ರಾಮದ ರಂಗಮಂದಿರದಲ್ಲಿ ನುಡಿ ನಮನ ವೇದಿಕೆ ಸಿದ್ದವಾಗಿದೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೆಚ್ಚಿನ ನಾಯಕ ಹೆಚ್ ಅಪ್ಪಯ್ಯಣ್ಣ ಅವರಿಗೆ ನುಡಿ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಟಿ ಎಸ್ ಉದಯ ಆರಾಧ್ಯ ಮಾತನಾಡಿ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮಿಜಿ, ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಆದಿಚುಂಚನಗಿರಿ ಶಾಖಾಮಠದ ಮಂಗಳನಾಥ ಸ್ವಾಮೀಜಿ, ಪುಷ್ಪಾಂಡಜ ಮಹರ್ಷಿ ಆಶ್ರಮದ ದಿವ್ಯಜ್ಞಾನಾಂದ ಸ್ವಾಮೀಜಿ ಸೇರಿದಂತೆ ಹಾಲಿ, ಮಾಜಿ ಸಂಸದರು, ಶಾಸಕರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.