
ದೊಡ್ಡಬಳ್ಳಾಪುರ(ಜ.13): ತಾಲೂಕಿನ ತೂಬಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ, ದಿ ಡಿವೈನ್ ಸ್ಟಾರ್ ಸಂಸ್ಥೆ ಪರವಾಗಿ ಖ್ಯಾತ ಜ್ಯೋತಿಷಿ ಮಹರ್ಷಿ ಆನಂದ ಗೂರೂಜಿ ಸೋಮವಾರ ಟ್ರ್ಯಾಕ್ ಸೂಟ್ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಿದರು.
ನಂತರ ಮಾತನಾಡಿ, ನಾವೆಲ್ಲ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಕಲಿತವರು. ಆಟದ ಮೈದಾನದಲ್ಲಿ ಕುಣಿದು, ಕುಪ್ಪಳಿಸುತ್ತಾ ಬಾನೆತ್ತರಕ್ಕೆ ಹಾರುವ ಕನಸು ಕಂಡವರು. ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ, ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಉತ್ತಮ ಭವಿಷ್ಯ ನಿಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಕಳೆದ ಹಲವು ವರ್ಷಗಳಿಂದ ಸಮವಸ್ತ್ರ ನೋಟ್ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ನೀಡುತ್ತಿರುವ ದಿ ಡಿವೈನ್ ಸ್ಟಾರ್ ಸಂಸ್ಥೆಯವರ ಸೇವೆಯ ಬಗ್ಗೆ ಗೂರೂಜಿ ಶ್ಲಾಘನೆ ವ್ಯಕ್ತಪಡಿಸಿದರು.
ದಿ ಡಿವೈನ್ ಸ್ಟಾರ್ ಸಂಸ್ಥೆ ಸಂಸ್ಥಾಪಕ ಡಾ. ರಾಜೀವ್ ಗೋಲ್ಚಾ ಮಾತನಾಡಿ, ಗೂರೂಜಿ ಆಶಯದಂತೆ ಪ್ರತಿಯೊಬ್ಬರೂ ಸೇವಾ ಮನೋಭಾವ ಮೈಗೂಡಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶ, ಕುಗ್ರಾಮಗಳ ಬಗ್ಗೆ ಕಾಳಜಿ ಹೊಂದಬೇಕು.
ಈ ನಿಟ್ಟಿನಲ್ಲಿ ನಾವು ಸರ್ಕಾರಿ ವಿದ್ಯಾರ್ಥಿಗಳಿಗಾಗಿ ಟ್ರ್ಯಾಕ್ ಸೂಟ್ ಮತ್ತು ಲೇಖನ ಸಾಮಗ್ರಿಗಳು ಹಾಗೂ ಅಗತ್ಯ ಸಾಮಗ್ರಿ ವಿತರಣೆ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾವಂತರಾಗಿ ಸಮಾಜದಲ್ಲಿ ಉತ್ತಮ ನಾಗರಿಕರಾಗಬೇಕು. ಮುಂದಿನ ದಿನಗಳಲ್ಲಿ ತೂಬಗೆರೆ ಶಾಲೆಗೆ ಮತ್ತಷ್ಟು ಅಗತ್ಯ ಇರುವ ಸೌಲಭ್ಯ ಒದಗಿಸಿಕೊಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ನಾಗರಾಜು, ಎಸ್ಡಿಎಂಸಿ ಅಧ್ಯಕ್ಷ ಹನುಮಂತರಾಜು, ಯುವ ಮುಖಂಡ ಉದಯ ಆರಾಧ್ಯ, ಹಳ್ಳಿ ರೈತ ಅಂಬರೀಶ್, ಮುನಿರಾಜಪ್ಪ, ದಿನ ಡಿವೈನ್ ಸ್ಟಾರ್ ಸಂಸ್ಥೆಯ ನೌಕರರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.