
ದೊಡ್ಡಬಳ್ಳಾಪುರ : ಕೆರೆ ಸಂಪನ್ಮೂಲ ಉಳಿಸುವಂತೆ ಹಾಗೂ ಶುದ್ಧ ಕುಡಿಯುವ ನೀರಿಗಾಗಿ ಮನವಿ ಕೊಟ್ಟು ಕೊಟ್ಟು ಮನನೊಂದಿರುವ ಹೋರಾಟಗಾರರು ಜನವರಿ 26ರ ಗಣರಾಜ್ಯೋತ್ಸವದ ದಿನ ತಮ್ಮ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸಲು ನಿರ್ಧರಿಸಿದ್ದಾರೆ
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡತುಮಕೂರು ಮತ್ತು ಮಜರಾ ಹೊಸಹಳ್ಳಿಯ ಗ್ರಾಮ ಪಂಚಾಯಿತಿಗಳ ಜಲ ಸಂಪನ್ಮೂಲ ಸಂಪೂರ್ಣ ಹಾಳಾಗಿದ್ದು , ದೊಡ್ಡಬಳ್ಳಾಪುರ ನಗರದ ಒಳಚರಂಡಿ ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ತ್ಯಾಜ್ಯ ನೀರು ನೇರವಾಗಿ ಕೆರೆಗೆ ಸೇರುತ್ತಿದೆ, ಇದರ ಪರಿಣಾಮ 17 ಗ್ರಾಮಗಳಲ್ಲಿ ಅಂತರ್ಜಲ ನೀರು ವಿಷವಾಗಿದೆ, ಶುದ್ಧ ನೀರು ಕೊಡುವಂತೆ ಕಳೆದೊಂದು ದಶಕದಿಂದಲೂ ಅರ್ಕಾವತಿ ನದಿ ಹೋರಾಟ ಸಮಿತಿ ಹೋರಾಟ ಮಾಡುತ್ತಲೇ ಬಂದಿದೆ.
ಶುದ್ದ ನೀರಿಗಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಉರುಳು ಸೇವೆ, ತಹಶೀಲ್ದಾರ್ ಕಛೇರಿ ಮುಂದೆ ಉಪವಾಸ ಸತ್ಯಾಗ್ರಹ, ತೆಪ್ಪದಲ್ಲಿ ಸತ್ಯಾಗ್ರಹ, ಹೆದ್ದಾರಿ ಬಂದ್ ಮಾಡಲಾಗಿದೆ, ಸ್ಥಳಕ್ಕೆ ಬರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ಅಶ್ವಾಸನೆ ಮಾತುಗಳನ್ನ ಕೊಡುತ್ತಾ ಬಂದಿದ್ದಾರೆ, ಇದರಿಂದ ಬೆಸತ್ತಿರುವ ಹೋರಾಟಗಾರರು ಜನವರಿ 26 ರಂದು 17 ಗ್ರಾಮಗಳ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸುವ ಎಚ್ಚರಿಕೆಯನ್ನ ನೀಡಿದ್ದಾರೆ.
ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸುವ ಹಿನ್ನಲೆ, ಇಂದು ಮನೆಗಳಿಗೆ ಭೇಟಿ ನೀಡುತ್ತಿರುವ ಅರ್ಕಾವತಿ ನದಿ ಹೋರಾಟ ಸಮಿತಿಯ ಹೋರಾಟಗಾರರು ಜಾಗೃತಿಯನ್ನ ಮೂಡಿಸುತ್ತಿದ್ದಾರೆ, ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಹೋರಾಟಗಾರರಾದ ಮಂಜುನಾಥ್,ಈ ಹಿಂದೆ ಈ ಕುರಿತಂತೆ ಎಚ್ಚರಿಸಿ ನಗರದ ಪ್ರವಾಸಿ ಬಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದೆವು , ಆದರೆ ತಾಲೂಕಿನ ಯಾವುದೇ ಜನಪ್ರತಿನಿಧಿಗಳು, ಹಾಗೂ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಗ್ರಾಮಗಳ ಪ್ರತಿ ಮನೆ ಮೇಲೆ ಜನವರಿ 26ರಂದು ಕಪ್ಪು ಬಾವುಟ ಹಾರಿಸಲು ಗ್ರಾಮಸ್ಥರು ನಿರ್ಧರಿಸಿದ್ದೇವೆ ಈ ಕುರಿತು ಸಹಿಸಂಗ್ರಹ ಅಭಿಯಾನವನ್ನು ಇಂದು ನೆಡೆಸಲಾಗುತ್ತಿದೆ ಎಂದರು.
ನಮ್ಮ ಬೇಡಿಕೆಗಳು
1. ಮಾಲಿನ್ಯ ನಿಯಂತ್ರಣ ಮಂಡಳಿ ದೊಡ್ಡಬಳ್ಳಾಪುರಕೆ ವರ್ಗಾಯಿಸಬೇಕು.
2. ದೊಡ್ಡಬಳ್ಳಾಪುರದ ಕೊಳೆಚೆನೀರಿಗೆ ವೈಜ್ಞಾನಿಕ ಶುದ್ದೀಕರಣ ಘಟಕ ಸ್ಥಾಪಿಸಬೇಕು.
3. ಕಾಡನೂರು ಪಂಚಾಯಿತಿಯಿಂದ ಅತಿ ಜರೂರಾಗಿ ಕೊಳವೆಬಾವಿ ಕೊರೆಸಿ ಎರಡು ಪಂಚಾಯಿತಿಗೆ ನೀರು ಕೊಡಬೇಕು.
4.ರಾಸಾಯನಿಕ ನೀರು ಬಿಡುವ ಕಾರ್ಖಾನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
ಮುಖಂಡರಾದ ಕಾಳೇಗೌಡ ಮಾತನಾಡಿ, ನಮ್ಮ ಮೂಲಭೂತ ಹಕ್ಕುಗಳಿಗಾಗಿ ಎಷ್ಟೇ ಹೋರಾಟ ಮಾಡಿದರೂ ಯಾವುದೇ ಸೌಕರ್ಯ ಸಿಗದೇ ಇರುವ ಕಾರಣ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಾಗೂ ಮುಂದಿನ ಪೀಳಿಗೆಯ ಆರೋಗ್ಯಕ್ಕಾಗಿ ಇಂದು ಹೋರಾಟ ಮಾಡಲೇ ಬೇಕಾದ ಅನಿವಾರ್ಯತೆಗೆ ಮುಂದಾಗಿದ್ದೇವೆ, ದೊಡ್ಡ ತುಮಕೂರು ಹಾಗೂ ಮಜರಾ ಹೊಸಹಳ್ಳಿ ಎರಡು ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಪ್ರತಿ ಮನೆಮನೆಗೂ ಭೇಟಿಕೊಟ್ಟು ಸಹಿ ಸಂಗ್ರಹ ಮಾಡುತ್ತಿದ್ದೇವೆ , ಈ ಸಹಿಸಂಗ್ರಹದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಿದ್ದೇವೆ ಎಂದರು
ಈ ವೇಳೆ ಗ್ರಾಮಸ್ಥರಾದ ಚನ್ನೇಗೌಡ, ವಿಜಿಕುಮಾರ್, ಶಿವಕುಮಾರ್, ಅಶ್ವತ್ಥಮ್ಮ, ದೇವಾಣಪ್ಪ ಇದ್ದರು