ದೊಡ್ಡಬಳ್ಳಾಪುರ : ಬಹುತೇಕ ಎಲ್ಲಾ ಇಲಾಖೆಗಳಲ್ಲಿಯೂ ಸಹ ಮಹಿಳಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು , ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ, ಹೆಣ್ಣು ಮಕ್ಕಳನ್ನು ಗೌರವಿಸುವ ಮತ್ತು ಹೆಣ್ಣಿನ ಪ್ರಾಮುಖ್ಯತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಯಶಸ್ವಿಯಾಗಿದೆ , ಹೆಣ್ಣನ್ನು ಗೌರವಿಸುವ ಸಮಾಜದಿಂದ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ, ಹೆಣ್ಣು ಮಕ್ಕಳನ್ನು ಸಮಾನರಂತೆ ಕಂಡಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿಯಾಗುವುದು ಎಂದು ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಆರ್.ವಿ.ಮಹೇಶ್ ಕುಮಾರ್ ಹೇಳಿದರು

ನಗರದ ರೋಜಿಪುರ ವಾರ್ಡ್ ನ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಜನವರಿ 24 ರಂದು ಭಾರತದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನ ಆಚರಣೆ ಮಾಡಲಾಗುತ್ತಿದೆ, ಉಜ್ವಲವಾದ ನಾಳೆಗಾಗಿ ಹೆಣ್ಣು ಮಕ್ಕಳ ಸಬಲೀಕರಣ ಎಂಬ ವಿಷಯದ ಮೇಲೆ 2008ರಿಂದ ಹೆಣ್ಣು ಮಕ್ಕಳ ದಿನವನ್ನ ಆಚರಣೆ ಮಾಡಲಾಗುತ್ತಿದೆ, ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ, ಲಿಂಗ ಅಸಮಾನತೆಯನ್ನ ಹೋಗಲಾಡಿಸುವುದು, ಹೆಣ್ಣು ಮಕ್ಕಳ ಸುರಕ್ಷತೆ, ಹೆಣ್ಣು ಮಕ್ಕಳನ್ನು ಗೌರವಿಸುವ ಮತ್ತು ಪ್ರೋತ್ಸಾಹಿಸುವುದರಿಂದ ಮಾತ್ರ ಮಹಿಳೆಯರ ಸಬಲೀಕರಣ ಸಾಧ್ಯ ಎಂದು ಹೇಳಿದರು.

ಶಿಶು ಅಭಿವೃದ್ದಿ ಯೋಜನಾಧಿಕಾರಿ ರವಿಕುಮಾರ್ ಮಾತನಾಡಿ, ಹೆಣ್ಣು ಮಕ್ಕಳು ಜೀವಿಸುವ, ರಕ್ಷಣೆ ಪಡೆಯುವ, ಅವರ ಹಕ್ಕುಗಳಿಗಾಗಿ ಹೋರಾಡುವ ಅವಕಾಶವನ್ನು ಭಾರತ ಸಂವಿಧಾನವೇ ನೀಡಿದೆ, ಇವತ್ತು ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ, ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ತಾರತಮ್ಯ ಮಾಡದೆ ನಾವು ಎಲ್ಲರಿಗೂ ಮುಕ್ತ ಅವಕಾಶ ನೀಡ ಬೇಕು, ಹೆಣ್ಣು ಮಕ್ಕಳ ಮೇಲಾಗುವ ಶೋಷಣೆಗಳ ವಿರುದ್ಧ ಸಮಾಜ ಧ್ವನಿ ಎತ್ತ ಬೇಕು, ಮುಖ್ಯವಾಗಿ ಅವರನ್ನು ಗೌರವದಿಂದ ನೋಡುವ ಸಮಾಜ ನಿರ್ಮಾಣವಾಗ ಬೇಕು ಎಂದು ಹೇಳಿದರು.
ಕಾರ್ಯಕ್ರಮದ ಆಯೋಜಕರಾದ ಶೈಲಜಾ ಗೌಡ ಮಾತನಾಡಿ ಹೆಣ್ಣು ಮಕ್ಕಳಿಗಾಗಿ ಮೀಸಲಿರುವ ವಿಶೇಷ ದಿನದ ಆಚರಣೆಯನ್ನು ಇಂದು ನಮ್ಮ ಅಂಗನವಾಡಿ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದೇವೆ. ಈ ರೀತಿಯ ಕಾರ್ಯಕ್ರಮಗಳ ಆಚರಣೆ ಒಂದು ಉತ್ತಮ ಬೆಳವಣಿಗೆ, ಸಮಾಜದಲ್ಲಿ ಹೆಣ್ಣಿನ ಮಹತ್ವ ಸಾರುವ ಇಂತಹ ಕಾರ್ಯಕ್ರಮಗಳು ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಹೆಚ್ಚಾಗಲಿ , ನಿರಂತರ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಲಿ, ಮಹಿಳಾ ಸಬಲೀಕರಣಕ್ಕೆ ನಾಂದಿಯಾಗಲಿ ಎಂದರು
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರವಿಕುಮಾರ್,ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೂಪಶ್ರೀ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಡ್ಡರಹಳ್ಳಿ ರವಿ, ಹಿರಿಯ ಮೇಲ್ವಿಚಾರಕರಾದ ನಿರ್ಮಲ, ಅಂಗನವಾಡಿ ಕಾರ್ಯಕರ್ತೆ ಶೈಲಜಾಗೌಡ ಮತ್ತು ಸಹಾಯಕರು, ಆಶಾ ಕಾರ್ಯಕರ್ತೆಯರು,ಶ್ರೀ ಪುಷ್ಪಾಂಜಲಿ ಸ್ತ್ರೀ ಶಕ್ತಿ ಸದಸ್ಯರು, ಮಕ್ಕಳು, ಪೋಷಕರು. ಭಾಗವಹಿಸಿದ್ದರು.
