ಕರ್ನಾಟಕ ಸರ್ಕಾರವು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ, ಒಕ್ಕೂಟ ಸಿದ್ಧಾಂತಗಳ ರೀತಿ ರಿವಾಜುಗಳಿಗೆ ಬದ್ಧವಾಗಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಂವಿಧಾನದ ಮಹತ್ವದ ಆಶಯವಾದ ಸಾಮಾಜಿಕ, ಆರ್ಥಿಕ ನ್ಯಾಯ ನೆಲೆಗೊಳಿಸಲು ಶಕ್ತಿ ಮೀರಿ ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಐದು ಗ್ಯಾರಂಟಿ ಕಲ್ಯಾಣ ಯೋಜನೆಗಳು ಯಶಸ್ವಿಯಾಗಿ ಜಾರಿಗೊಂಡು ದೇಶದ ಗಮನ ಸೆಳೆದಿವೆ ಎಂದು ರಾಜ್ಯಪಾಲರದ ಥಾವರ್‌ಚಂದ್ ಗೆಹ್ಲೋಟ್ ಹೇಳಿದರು.
76 ನೇ ಗಣರಾಜ್ಯೋತ್ಸವ ಅಂಗವಾಗಿ ಫೀಲ್ಡ್ ಮಾರ್ಷಲ್ ಮಾಣಿಕ್‌ಷಾ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
76 ವರ್ಷಗಳ ಹಿಂದೆ ಇದೇ ದಿನದಂದು ಭಾರತೀಯರಾದ ನಾವು ನಮಗೆ ನಾವೇ ಅರ್ಪಿಸಿಕೊಂಡ ಸಂವಿಧಾನದ ಮೂಲಕ ಈ ದೇಶದಲ್ಲಿ ಸಾಮ್ರಾಜ್ಯಶಾಹಿ, ವಸಾಹತುಶಾಹಿ ಆಡಳಿತಕ್ಕೆ ಇತಿಶ್ರೀ ಹಾಡಿ ಜನಾಡಳಿತದ ಹೊಸ ಪರ್ವ ಪ್ರಾರಂಭಿಸಿದೆವು. ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚಿಸಿದ ಎಲ್ಲ ಮಹನೀಯರನ್ನು ಸ್ಮರಿಸೋಣ ಎಂದರು.
*ವಿವಿಧ ಗ್ಯಾರೆಂಟಿ ಯೋಜನೆಯಡಿ ಆರ್ಥಿಕ ನೆರವು* :
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ.ಗಳಂತೆ 2023 ರ ಆಗಸ್ಟ್‌ನಿಂದ ಇಲ್ಲಿಯವರೆಗೆ ಒಟ್ಟು 35,180.20 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ.
ಗೃಹಜ್ಯೋತಿ ಯೋಜನೆಯಡಿ 1.62 ಗ್ರಾಹಕರು ಪ್ರಯೋಜನ ಪಡೆಯುತ್ತಿದ್ದು ವಿದ್ಯುತ್ ಸರಬರಾಜು ಕಂಪನಿಗಳಿಗೆ 13,409 ಕೋಟಿ ರೂ.ಸಬ್ಸಿಡಿ ಮೊತ್ತ ನೀಡಲಾಗಿದೆ.
ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ 9,051 ಕೋಟಿ ರೂ. ವಿನಿಯೋಗಿಸಲಾಗಿದೆ.
ಯುವನಿಧಿ ಯೋಜನೆಯಡಿ 2,18,214 ಜನ ನೋಂದಣಿ ಮಾಡಿಕೊಂಡಿದ್ದು ಈವರೆಗೆ 1,24,176 ಅರ್ಹರಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ.
ಯುವನಿಧಿ ಪ್ಲಸ್ ಉಪಕ್ರಮದಡಿ ಯುವಜನರ ಉದ್ಯೋಗ ಸಾಮರ್ಥ್ಯ ಹೆಚ್ಚಿಸಲು ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು ಎಂದರು.
ಜನರ ಹಸಿವನ್ನು ನೀಗಿಸುವ ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿ ಜೊತೆಗೆ ಹೆಚ್ಚುವರಿ 5 ಕೆಜಿ ಅಕ್ಕಿಗೆ ಬದಲಾಗಿ ಪ್ರತಿ ಸದಸ್ಯರಿಗೆ 170 ರೂ.ಗಳಂತೆ 4,48,12,382 ಫಲಾನುಭವಿಗಳಿಗೆ 9,775 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಾಗಿದೆ ಎಂದರು.
ರಾಜ್ಯದ ಹಣಕಾಸು ವ್ಯವಸ್ಥೆ ಉತ್ತಮವಾಗಿ ನಿರ್ವಹಿಸಿರುವ ಆದಾಯ ಸಂಗ್ರಹದಲ್ಲಿ ಶೇ.13 ರಷ್ಟು ಪ್ರಗತಿ ಸಾಧಿಸಿದೆ. ರಾಜ್ಯಗಳು ಸಂಗ್ರಹಿಸುವ ಜಿಎಸ್‌ಟಿ ಆದಾಯದಲ್ಲಿ ಕರ್ನಾಟಕವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಬಲಪಡಿಸಲು ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದೆ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 13 ಸಾವಿರಕ್ಕೂ ಅಧಿಕ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಹಾಸನದಲ್ಲಿ 142 ಕೋಟಿ ರೂ.ವೆಚ್ಚದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ, ಕಲಬುರ್ಗಿಯಲ್ಲಿ 54 ಕೋಟಿ ರೂ. ವೆಚ್ಚದಲ್ಲಿ ಟ್ರಾಮಾ ಕೇರ್ ಆಸ್ಪತ್ರೆ, ಕೆಕೆಆರ್‌ಡಿಬಿಯ 304 ಕೋಟಿ ರೂ.ವೆಚ್ಚದಲ್ಲಿ ಜಯದೇವ ಹೃದ್ರೋಗ ಹಾಗೂ ಸಂಶೋಧನಾ ಸಂಸ್ಥೆ ನಿರ್ಮಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಮೂಲಗಳ ಗುಣಮಟ್ಟ ಕಾಪಾಡಿಕೊಳ್ಳಲು ರಾಜ್ಯದಲ್ಲಿ 79 ಪ್ರಯೋಗಾಲಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು.
ರಾಜ್ಯದ ಸಮತೋಲಿತ ,ಸಮಗ್ರ ಅಭಿವೃದ್ಧಿಗಾಗಿ ಡಾ.ಡಿ.ಎಂ.ನಂಜುಂಡಪ್ಪ ವರದಿ ಅನುಷ್ಠಾನ ಮಾಡಲಾಗಿದೆ. ಉದ್ದೇಶಿತ ಗುರಿಗಳ ಸಾಧನೆ ಮಾಡಲಾಗಿದೆಯೆ ಎಂಬುದನ್ನು ಅರಿಯಲು ಪ್ರೊ.ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಂವಿಧಾನದ 371(ಜೆ) ಅನುಚ್ಛೇದ ಜಾರಿಗೊಳಿಸಲಾಗಿದೆ.
ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್,ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್,ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್,ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.
