
ದೇವನಹಳ್ಳಿ : ಸರ್ಕಾರಿ ಜಾಗವನ್ನ ಉಳಿಸಿ ಮತ್ತು ಒತ್ತುವರಿಯನ್ನ ತೆರವು ಮಾಡುವಂತೆ ಒತ್ತಾಯಿಸಿ ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.
ದೇವನಹಳ್ಳಿಯ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಬೆಂಗಳೂರು ಗ್ರಾಮಾಂತರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ತಮಟೆ ಹೊಡೆಯುವ ಮೂಲಕ ವಿಶೇಷ ರೀತಿಯ ಪ್ರತಿಭಟನೆಯನ್ನು ನಡೆಸಿದರು,
ಈ ವೇಳೆ ಜಿಲ್ಲಾಧ್ಯಕ್ಷ ಬಿ.ಶಿವಶಂಕರ್ ಮಾತನಾಡಿ ದೇವನಹಳ್ಳಿಯ ಅಕ್ಕುಪೇಟೆಯಲ್ಲಿ 35 ವರ್ಷಗಳ ಹಿಂದೆ 150 ಜನರಿಗೆ ಅಶ್ರಯ ಯೋಜನೆಯಲ್ಲಿ ನಿವೇಶನ ಮಂಜೂರು ಮಾಡಿ ಹಕ್ಕುಪತ್ರ ವಿತರಣೆ ಮಾಡಲಾಗಿತ್ತು, ಆದರೆ ಈ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡು ಆಸ್ಪತ್ರೆಯನ್ನ ನಿರ್ಮಿಸಿ ಹಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಹೈಕೋರ್ಟ್ ಸದರಿ ಜಾಗವನ್ನು ಸರ್ಕಾರಕ್ಕೆ ವಶಕ್ಕೆ ಪಡೆದು ಮೂಲ ಮಂಜೂರುದಾರರಿಗೆ ನಿವೇಶನ ನೀಡುವಂತೆ ಆದೇಶ ನೀಡಿದೆ, ಈ ಸಂಬಂಧ ಅಧಿಕಾರಿಗಳು ಸದರಿ ಸ್ಥಳಕ್ಕೆ ಭೇಟಿ ನೀಡಿ 150 ಕುಟುಂಬಗಳಿಗೆ ನಿವೇಶನಗಳನ್ನು ನೀಡುವಂತೆ ಆಗ್ರಹಿಸಿದರು.
ರಾಜ್ಯ ಯುವ ಘಟಕ ಪ್ರಧಾನ ಕಾರ್ಯದರ್ಶಿ ನಿಖಿಲ್ ಮಾತನಾಡಿ, ಬೀರಸಂದ್ರ ಗ್ರಾಮದ ಚಪ್ಪರಕಲ್ಲು ಬಳಿಯ ಸರ್ವೆ ನಂಬರ್ 11ರ ಸರ್ಕಾರಿ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬ ವಾಣಿಜ್ಯ ಮಳಿಗೆ ನಿರ್ಮಿಸಿ ಅಕ್ರಮವಾಗಿ ಬಾಡಿಗೆಯನ್ನು ವಸೂಲಿ ಮಾಡುತ್ತಿದ್ದಾರೆ . ವರ್ಷಕ್ಕೆ 80 ಲಕ್ಷ ಬಾಡಿಗೆಯನ್ನ ವಸೂಲಿ ಮಾಡುತ್ತಿರುವ ಆತ ಕಳೆದ 21 ವರ್ಷದಿಂದ ಸುಲಿಗೆ ಮಾಡುತ್ತಿದ್ದಾರೆ , ಇಷ್ಟೇ ಅಲ್ಲದೆ ಪ್ರತಿ ತಿಂಗಳು ಬಾಡಿಗೆಯನ್ನ ಹೆಚ್ಚಿಸುವ ಮೂಲಕ ಬಾಡಿಗೆದಾರರನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ಸ್ಥಳದಲ್ಲಿ ಆಟೋ ಚಾಲಕರು ಸುಸಚ್ಛಿತವಾದ ಬಸ್ ನಿಲ್ದಾಣ ಮತ್ತು ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದಾರೆ ಆದರೆ ಇಲ್ಲಿಯವರೆಗೂ ಅವರ ಸಮಸ್ಯೆಗಳನ್ನ ಬಗೆಹರಿಸಿಲ್ಲ ಎಂದರು
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆಆರ್ ಎಸ್ ಪಕ್ಷದ ಸರ್ವ ಪದಾಧಿಕಾರಿಗಳು,ಕಾರ್ಯಕರ್ತರು ಉಪಸ್ಥಿತರಿದ್ದರು.