
ದೊಡ್ಡಬಳ್ಳಾಪುರ : ತಾಲ್ಲೂಕಿನ ಎಳ್ಳು ಪುರ ಕ್ರಾಸ್ ಅನ್ನು ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ರವರ 50ನೇ ವರ್ಷದ ಹುಟ್ಟು ಹಬ್ಬದಂದು ಅವರ ಸವಿನೆನಪಿಗಾಗಿ ಡಾ. ಪುನೀತ್ ರಾಜಕುಮಾರ್ ವೃತ್ತ ಎಂದು ನಾಮಕರಣ ಮಾಡಿ ನಾಮಫಲಕ ಅನಾವರಣಗೊಳಿಸಲಾಯಿತು.
ದೊಡ್ಡಬಳ್ಳಾಪುರ ನಗರಸಭೆ ಉಪಾಧ್ಯಕ್ಷ ಎಂ ಮಲ್ಲೇಶ್ ನಾಮಫಲಕ ಲೋಕಾರ್ಪಣೆ ಮಾಡಿ ಮಾತನಾಡಿದರು ಚಿತ್ರರಂಗದ ಇತಿಹಾಸದಲ್ಲಿ ಯಾವ ನಟರಿಗೂ ಸಿಗದ ಅತ್ಯುತ್ತಮ ಗೌರವ ಡಾ. ಪುನೀತ್ ರಾಜಕುಮಾರ್ ಅವರಿಗೆ ಲಭಿಸಿದೆ . ಅವರ ನಿಸ್ವಾರ್ಥ ಸೇವಾ ಕಾರ್ಯಗಳೇ ಇಂದು ಅವರನ್ನು ಪ್ರತಿಯೊಬ್ಬರ ಜೀವನಕ್ಕೆ ಸ್ಪೂರ್ತಿಯಾಗಿಸಿದೆ. ಅವರು ನಮ್ಮೊಂದಿಗೆ ಇಲ್ಲದೆ ಮೂರು ವರ್ಷ ಕಳೆದರೂ ಇಂದಿಗೂ ಅವರ ಸವಿ ನೆನಪಿರಲಿ ಸದಾ ಉತ್ತಮ ಸೇವಾ ಕಾರ್ಯಗಳು ನಡೆಯುತ್ತಿರುವುದು ಅವರ ಸರಳತೆ ಸೇವಾ ಮನೋಭಾವಕ್ಕೆ ಹಿಡಿದ ಕನ್ನಡಿ ಯಾಗಿದೆ ಎಂದರು.
ಸ್ಥಳೀಯವಾಗಿ ಎಳ್ಳು ಪುರ ಗ್ರಾಮದ ಯುವಕರು ಪ್ರತಿ ವರ್ಷವೂ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದು ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಪುನೀತ್ ರಾಜಕುಮಾರ್ ರವರ ಆದರ್ಶಗಳನ್ನು ಬಿತ್ತುತ್ತಿದ್ದಾರೆ , ಈ ಬಾರಿ ವಿಶೇಷವಾಗಿ ಅವರ ಹೆಸರಿನಲ್ಲಿ ಸ್ಥಳೀಯ ವೃತ್ತದ ನಾಮಕರಣಕ್ಕೆ ಮುಂದಾಗಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ ಹಸಿದ ಹೊಟ್ಟೆಗಳಿಗೆ ಆಹಾರ ವಿತರಣೆ ಮಾಡುವ ಅನ್ನ ದಾಸೋಹವನ್ನು ಸಹ ಏರ್ಪಡಿಸಿದ್ದಾರೆ. ಪುನೀತ್ ರಾಜಕುಮಾರ್ ರವರ ಆಶಯದಂತೆ ಯುವಕರು ಸೇವಾ ಕಾರ್ಯಗಳಲ್ಲಿ ಮತ್ತಷ್ಟು ಪಾಲ್ಗೊಳ್ಳಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಆಯೋಜಕ ಏಳ್ಳುಪುರ ಪುನೀತ್ ಅಪ್ಪು ಮಾತನಾಡಿ ಪ್ರತಿ ವರ್ಷವೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತೇವೆ. ಅಂತೆಯೇ ಈ ಬಾರಿ ಎಲ್ಲ ಯುವಕರ ಆಶಯದಂತೆ ಹಿರಿಯರ ಮಾರ್ಗದರ್ಶನದೊಂದಿಗೆ ನಮ್ಮ ಎಳ್ಳುಪುರ ಕ್ರಾಸ್ ಅನ್ನು ಡಾ. ಪುನೀತ್ ರಾಜಕುಮಾರ್ ವೃತ್ತ ಎಂದು ಮರುನಾಮಕರಣ ಮಾಡಲಾಗಿದೆ. ಪುನೀತ್ ರಾಜಕುಮಾರ್ ಅವರು ಸದಾ ಅಮರರು ಅವರು ನಮ್ಮೊಂದಿಗೆ ಸದಾ ಇರುತ್ತಾರೆ ಎಂಬ ಭಾವನೆ ಎಲ್ಲರಲ್ಲೂ ಮೂಡಲಿ ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಅಭಿಮಾನಿಗಳಿಗೆ ಅನ್ನದಾಸೋಹ ಏರ್ಪಡಿಸಿದ್ದು, ಕೇಕ್ ಕತ್ತರಿಸಿ ಸಿಹಿ ಹಚ್ಚುವ ಮೂಲಕ ತಮ್ಮ ನೆಚ್ಚಿನ ನಾಯಕ ನಟರ ಹುಟ್ಟುಹಬ್ಬವನ್ನು ಸಂಭ್ರಮಿಸಿದರು.
ಗ್ರಾಮದ ಹಿರಿಯ ಮುಖಂಡ ರಾಮಾಂಜಿನಪ್ಪ ಮಾತನಾಡಿ ಯುವಕರ ಈ ಕಾರ್ಯ ಶ್ಲಾಘನೀಯ. ಡಾಕ್ಟರ್ ಪುನೀತ್ ರಾಜಕುಮಾರ್ ಹೆಸರನ್ನು ಎಳ್ಳುಪುರ ವೃತ್ತಕ್ಕೆ ನಾಮಕರಣ ಮಾಡಿರುವುದು ಅರ್ಥಪೂರ್ಣವಾಗಿದೆ. ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಯುವಕರ ನಡೆ ಮತ್ತಷ್ಟು ಹೆಚ್ಚಾಗಲಿ ಸೇವಾ ಕಾರ್ಯಗಳ ಮೂಲಕ ಪುನೀತ್ ರಾಜಕುಮಾರ್ ರವರ ಕೀರ್ತಿ ಮತ್ತಷ್ಟು ಹೆಚ್ಚಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಮುನಿಶಂಕರ್,ರಾಮಾಂಜಿನಪ್ಪ,ಬೀರಸಂದ್ರ ಚಂದ್ರಣ್ಣ,ರಘು ಸೇರಿದಂತೆ ಸ್ಥಳೀಯ ಗ್ರಾಮಸ್ಥರು , ಡಾ. ಪುನೀತ್ ರಾಜಕುಮಾರ್ ಅಭಿಮಾನಿಗಳು ಹಾಜರಿದ್ದರು.