
ಕೇಂದ್ರ ಇಂಧನ ಪ್ರಾಧಿಕಾರದ ನಿರ್ದೇಶನದಂತೆ 2021-22 ನೇ ಸಾಲಿನಲ್ಲಿ ಕೇಂದ್ರದ ಇಂಧನ ಸಚಿವಾಲಯವು ಪರಿಷ್ಕೃತ ವಿತರಣಾ ವಲಯ ಯೋಜನೆ (RDSS- Revamped Distribution Sector Scheme) ರೂಪಿಸಿತ್ತು. ಈ ಯೋಜನೆ ಒಪ್ಪಿಕೊಂಡಿದ್ದರೆ, ಎಲೆಕ್ಟ್ರಿಕಲ್ ಮೂಲ ಸೌಕರ್ಯವನ್ನು ಒದಗಿಸಲು ಕೇಂದ್ರ ಸರ್ಕಾರ ಶೇ. 60ರಷ್ಟು ಅನುದಾನ ನೀಡುತ್ತಿತ್ತು. ಜತೆಗೆ, ಸ್ಮಾರ್ಟ್ ಮೀಟರ್ಗಳ ಬದಲಾವಣೆ ಮಾಡಲು ಒಟ್ಟು ವೆಚ್ಚದ ಶೇ.15ರಷ್ಟು ಅಥವಾ ಗರಿಷ್ಠ 900 ರೂ. ಕೇಂದ್ರ ಸರ್ಕಾರ ನೀಡುತ್ತಿತ್ತು. ಆದರೆ, ರಾಜ್ಯ ಸರ್ಕಾರಗಳು ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಬಾಕಿ ಇರುವ ಸಬ್ಸಿಡಿ, ಇತರೆ ಬಾಕಿಗಳನ್ನು ಪಾವತಿಸಿದರೆ ಮಾತ್ರ ಯೋಜನೆಯ ಅನುಕೂಲ ಪಡೆದುಕೊಳ್ಳಬಹುದು ಎಂದು ಹೇಳಿತ್ತು. ಅಲ್ಲದೆ, ಎಲ್ಲಾ ಗ್ರಾಹಕರೂ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳುವುದು ಕಡ್ಡಾಯ ಎಂದು ಹೇಳಿತ್ತು. ಈ ಷರತ್ತುಗಳನ್ನು ಅಂದಿನ ಸರ್ಕಾರ ಒಪ್ಪದ ಕಾರಣ ರಾಜ್ಯವು ಕೇಂದ್ರದ ಆರ್ ಡಿಎಸ್ ಯೋಜನೆಯನ್ನು ಒಪ್ಪಿಕೊಂಡಿರಲಿಲ್ಲ. ಕೇಂದ್ರ ಸರ್ಕಾರದ ಆರ್ ಡಿಎಸ್ ಯೋಜನೆ ಒಪ್ಪಿಕೊಂಡಿದ್ದರೆ, ಹಾಲಿ ಗ್ರಾಹಕರು ಸೇರಿದಂತೆ ಎಲ್ಲರೂ ಸ್ಮಾರ್ಟ್ ಮೀಟರ್ ಅವಡಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಇತ್ತು. ಆರ್ಡಿಎಸ್ ಯೋಜನೆಯಡಿ ಸ್ಮಾರ್ಟ್ ಮೀಟರ್ ಮತ್ತು ಸಾಫ್ಟ್ವೇರ್ ಸೇರಿ ದರ ನಿಗದಿಪಡಿಸಲಾಗುತ್ತದೆ
*ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಕ್ರಿಯೆಯೇ ವಿಭಿನ್ನ*
“ಆರ್ ಡಿಎಸ್ಎಸ್ ಅನುಷ್ಠಾನಗೊಳಿಸಿರುವ ರಾಜ್ಯಗಳ ವಿದ್ಯುತ್ ಸರಬರಾಜು ಕಂಪನಿಗಳು ಎಲ್ಲಾ ಮನೆಗಳಲ್ಲಿ ಏಕ ಕಾಲದಲ್ಲಿ (Bulk replacement) ಸ್ಮಾರ್ಟ್ ಮೀಟರ್ ಅಳವಡಿಸಿ ಅದಕ್ಕೆ ಪೂರಕವಾದ ತಾಂತ್ರಿಕ ನಿರ್ವಹಣೆ ವೆಚ್ಚವನ್ನು ಪ್ರತಿ ತಿಂಗಳ ಬಿಲ್ನಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತವೆ. ಅಂದರೆ, ಕಂತಿನಲ್ಲಿ ಸ್ಮಾರ್ಟ್ಮೀಟರ್ ಹಾಗೂ ತಾಂತ್ರಿಕ ನಿರ್ವಹಣೆ ವೆಚ್ಚವನ್ನು ಗ್ರಾಹಕರಿಂದ ವಸೂಲಿ ಮಾಡುತ್ತವೆ. ಆದರೆ, ನಮ್ಮ ರಾಜ್ಯದಲ್ಲಿ ಇರುವ ನಿಯಮದ ಪ್ರಕಾರ, ವಿದ್ಯುತ್ ಮೀಟರ್ಗಳನ್ನು ಗ್ರಾಹಕರೇ ಭರಿಸಬೇಕು. ಆರ್ಡಿಎಸ್ಎಸ್ ಅನುಷ್ಠಾನಗೊಳಿಸದ ಕಾರಣ ನಮ್ಮಲ್ಲಿ ಹೊಸ ಮತ್ತು ತಾತ್ಕಲಿಕ ಸಂಪರ್ಕಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸುತ್ತಿರುವುದರಿಂದ ಮೀಟರ್ ದರವನ್ನು (ಸಿಂಗಲ್ ಫೇಸ್ – 4,998 ರೂ.) ಆ ಗ್ರಾಹಕರೇ ಭರಿಸಬೇಕಾಗುತ್ತದೆ. ಪ್ರತಿ ತಿಂಗಳ ತಾಂತ್ರಿಕ ನಿರ್ವಹಣೆ ವೆಚ್ವವನ್ನು ಬೆಸ್ಕಾಂ ಭರಿಸಿ, ನಂತರ ದರ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ತಾತ್ಕಾಲಿಕ ಸಂಪರ್ಕಕ್ಕೆ ಪ್ರಿ-ಪೇಯ್ಡ್ಗೆ ಮಾತ್ರ ಅವಕಾಶವಿದ್ದು, ಪೋಸ್ಟ್ ಪೇಯ್ಡ್ ಆಯ್ಕೆ ಇರುವುದಿಲ್ಲ. ಹೊಸ ಸಂಪರ್ಕಗಳಿಗೆ ಪ್ರಿ-ಪೇಯ್ಡ್ ಹಾಗೂ ಪೋಸ್ಟ್-ಪೇಯ್ಡ್ ಆಯ್ಕೆ ಲಭ್ಯವಿರುತ್ತದೆ”,
*ದರ/ಸಾಫ್ಟ್ವೇರ್ ವ್ಯತ್ಯಾಸ ಏನು?*
“ಆರ್ಡಿಎಸ್ಎಸ್ ಜಾರಿಯಲ್ಲಿರುವ ರಾಜ್ಯಗಳಲ್ಲಿ ಏಕಕಾಲದಲ್ಲಿ ಎಲ್ಲ ಹಾಲಿ ಮೀಟರ್ಗಳನ್ನು ಸ್ಮಾರ್ಟ್ ಮೀಟರ್ಗಳಾಗಿ ಬದಲಾಯಿಸಲಾಗುತ್ತದೆ. ಆಗ ಮೀಟರ್ಗಳನ್ನು ಸಗಟು ದರದಲ್ಲಿ ಖರೀದಿಸುವುದರಿಂದ ಕಡಿಮೆ ಬೆಲೆಗೆ ಸಿಗುತ್ತದೆ. ನಿರ್ದಿಷ್ಟ ಪ್ರದೇಶದ ಪೂರ್ಣ ವ್ಯಾಪ್ತಿಯಲ್ಲಿ ಮೀಟರ್ಗಳನ್ನು ಬದಲಾಯಿಸುವುದರಿಂದ ಸಾರಿಗೆ, ಸಿಬ್ಬಂದಿ ವೆಚ್ಚ ಕಡಿಮೆಯಾಗುತ್ತದೆ. ಹಾಗಾಗಿ, ಇಡೀ ಪ್ರಕ್ರಿಯೆಯನ್ನು ಕಡಿಮೆ ಅವಧಿಯಲ್ಲಿಯೂ ಪೂರ್ಣಗೊಳಿಸಬಹುದಾಗಿದೆ. ಈ ರಾಜ್ಯಗಳಲ್ಲಿ ಸಂವಹನಕ್ಕಾಗಿ ರೇಡಿಯೋ ಫ್ರಿಕ್ವೆನ್ಸಿ (RF) ಅಥವಾ ಜಿಪಿಆರ್ಎಸ್ ತಂತ್ರಜ್ಞಾನಗಳ ಬಳಕೆ ಮಾಡಬಹುದಾದ ಸ್ಮಾರ್ಟ್ ಮೀಟರ್ಗಳನ್ನು ಅಳವಡಿಸಲಾಗುತ್ತಿದೆ. ಈ ಮೀಟರ್ಗಳ ದರ ಸ್ವಾಪಬಲ್ ಮೀಟರ್ಗಿಂತ ಕಡಿಮೆ ಇರುತ್ತದೆ.
“ರಾಜ್ಯದಲ್ಲಿ ಅಳವಡಿಸುತ್ತಿರುವ ಸ್ಮಾರ್ಟ್ ಮೀಟರ್ಗಳು – ರೇಡಿಯೋ ಫ್ರಿಕ್ವೆನ್ಸಿ (RF) ಮತ್ತು ಜಿಪಿಆರ್ಎಸ್ ತಂತ್ರಜ್ಞಾನಗಳೆರಡನ್ನು ಹೊಂದಿದ್ದು, ಅಗತ್ಯಕ್ಕೆ ಅನುಗುಣವಾಗಿ ಪರಸ್ಪರ ಬದಲಾಯಿಸಬಹುದಾದಾಗಿದೆ (Swappable Model).
“ಕೇಂದ್ರ ಸರ್ಕಾರದ ಸಬ್ಸಿಡಿ ಸೇರಿ 10 ವರ್ಷಗಳ ಕಾಲ ಪ್ರತಿ ಸ್ಮಾರ್ಟ್ ಮೀಟರ್ ಮತ್ತು ತಾಂತ್ರಿಕ ನಿರ್ವಹಣೆಗೆ ಪ್ರತಿ ತಿಂಗಳು ತಗಲುವ ವೆಚ್ಚ -ಮಹಾರಾಷ್ಟ್ರದಲ್ಲಿ 120.34 ರೂ., ಪಶ್ಚಿಮ ಬಂಗಾಳದಲ್ಲಿ 117.81 ರೂ., ಸಿಕ್ಕಿಂ ರಾಜ್ಯದಲ್ಲಿ 148.88 ರೂ., ಮಣಿಪುರದಲ್ಲಿ 130.30 ರೂ., ಮಧ್ಯಪ್ರದೇಶದಲ್ಲಿ 115.84 ರೂ. ಆಗುತ್ತದೆ. ಕರ್ನಾಟಕದಲ್ಲಿ ಈ ಮೊತ್ತವು ಕೇವಲ 116.65 ರೂ. ಆಗುತ್ತದೆ.
*ಸ್ಮಾರ್ಟ್ ಮೀಟರ್ ವೈಶಿಷ್ಟ್ಯ*
ಹಳೆಯ ಮಾದರಿಯ ಮೀಟರ್ಗಳಿಗಿಂತ ವಿಶಿಷ್ಟವಾಗಿರುವ ಸ್ಮಾರ್ಟ್ ಮೀಟರ್ಗಳು ಜಿಪಿಆರ್ಎಸ್ ಆಧಾರಿತ ಸಂವಹನ ಡೇಟಾ ಸಂಗ್ರಹಣೆಗೆ ಸರ್ವರ್ ಹಾಗೂ ಕ್ಲೌಡ್ ಸಂಪರ್ಕ ಹೊಂದಿರುತ್ತದೆ. ಅಡ್ವಾನ್ಸ್ಡ್ ಮೀಟರಿಂಗ್ ಇನ್ಫ್ರಾಸ್ಟ್ರಕ್ಚರ್ (AMI) ತಂತ್ರಜ್ಞಾನದ ಸ್ಮಾರ್ಟ್ ಮೀಟರ್ಗಳು ವಿದ್ಯುತ್ ಬಳಕೆ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಗ್ರಾಹಕರು ಹಾಗೂ ಎಸ್ಕಾಂಗಳ ನಡುವೆ ನೇರ ಸಂಪರ್ಕ ಕಲ್ಪಿಸಲಿದೆ. ಮೊಬೈಲ್ ಅಪ್ಲಿಕೇಶನ್ ಮೂಲಕ ನೈಜ ಸಮಯದ ವಿದ್ಯುತ್ ಬಳಕೆ, ವೊಲ್ಟೇಜ್, ಪವರ್ ಫ್ಯಾಕ್ಟರ್ ಮಾಹಿತಿ ಹಾಗೂ ರೀಚಾರ್ಜ್ ಸೌಲಭ್ಯ ಪಡೆಯಬಹುದಾಗಿದೆ. ಮುಂಚಿತವಾಗಿ ಹಣ ಪಾವತಿಸಿ ತಮ್ಮ ಆಯ್ಕೆಯ ದಿನಗಳ ಅವಧಿಗೆ ರಿಜಾರ್ಜ್ ಮಾಡಿಕೊಳ್ಳಬಹುದು. ಗ್ರಾಹಕರು ಮುಂಚಿತವಾಗಿ ಹಣ ಪಾವತಿಸಿ ವಿದ್ಯುತ್ ಬಳಸಬಹುದಾಗಿದೆ. ಒಂದು ವೇಳೆ ವಿದ್ಯುತ್ ಕಡಿತಗೊಂಡರೆ ಗ್ರಾಹಕರು ಬಿಲ್ ಪಾವತಿಸಿದ ತಕ್ಷಣ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬಹುದಾಗಿದೆ.