
ದೊಡ್ಡಬಳ್ಳಾಪುರ : ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ನಗರದ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ಶ್ರೀ ರಾಮೋತ್ಸವ ಹಾಗೂ ಬೃಹತ್ ಶ್ರೀರಾಮ ಶೋಭಾಯಾತ್ರೆ ಏ.11ರಿಂದ ಮೂರು ದಿನಗಳ ಕಾಲ ಆಯೋಜನೆ ಮಾಡಲಾಗಿದ್ದು, ಏ.13ರಂದು ಬೃಹತ್ ಶ್ರೀರಾಮ ಶೋಭಾಯಾತ್ರೆ ನಡೆಯಲಿದೆ ಎಂದು ಬಜರಂಗದಳ ಕೋಲಾರ ವಿಭಾಗಿಯ ಸಂಯೋಜಕ ನರೇಶ್ ರೆಡ್ಡಿ ತಿಳಿಸಿದ್ದಾರೆ.
ನಗರದ ಬಜರಂಗದಳದ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಶ್ರೀರಾಮೋತ್ಸವ ಹಾಗೂ ಬೃಹತ್ ಶ್ರೀರಾಮ ಶೋಭಾಯಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ , 3 ವರ್ಷಗಳಿಂದ ಈ ಕಾರ್ಯಕ್ರಮವು ಬೃಹತ್ ಉತ್ಸವವಾಗಿ ನಡೆಯುತ್ತಿದೆ. ಕಾರ್ಯಕ್ರಮದ ಅಂಗವಾಗಿ ವಾಹನ ಜಾಥಾ, ಹೋಮ ಹವನಾದಿಗಳು, ಕಲ್ಯಾಣೋತ್ಸವ, ವಿವಿಧ ದೇವರುಗಳ ಬೃಹತ್ ಶೋಭಾ ಯಾತ್ರೆ ನಡೆಯಲಿದೆ,ಈ ಬಾರಿ ನೆಡೆಯುವ ಹೋಮದ ಪೂಜೆಯಲ್ಲಿ ಪೌರಕಾರ್ಮಿಕ ದಂಪತಿಗಳು ಭಾಗವಹಿಸುತ್ತಿರುವುದು ವಿಶೇಷವಾಗಿದೆ ಎಂದರು.
ಕಾರ್ಯಕ್ರಮಗಳು :
* ಏ.11ರಂದು ಸಂಜೆ 4 ಗಂಟೆಗೆ ನಗರದ ದರ್ಗಾಜೋಗಿಹಳ್ಳಿಯ ಕೆಂಪಮ್ಮ ದೇವಾಲಯದ ಬಳಿಯಿಂದ ಬೈಕ್, ಕಾರು ಸೇರಿದಂತೆ ವಿವಿಧ ವಾಹನಗಳ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಸಂಜೆ 6.30 ಗಂಟೆಗೆ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
* ಏ.12ರಂದು ಬೆಳಿಗ್ಗೆ 7 ಗಂಟೆಯಿಂದ ಗೋ ಪೂಜೆ, ಮಹಾಗಣಪತಿ ಹೋಮ, ರಾಮ ತಾರಕ ಹೋಮ, ದುರ್ಗಾ ಹೋಮಗಳಿವೆ. ಮಧ್ಯಾಹ್ನ ಸಾವಿರಾರು ಮಹಿಳೆಯರಿಂದ ಲಲಿತ ಸಹಸ್ರನಾಮ ಮತ್ತು ಹನುಮಾನ್ ಚಾಲಿಸ್ ಸಾಮೂಹಿಕ ಪಠಣ ನಡೆಯಲಿದೆ. ಸಂಜೆ 4 ಗಂಟೆಗೆ ಶ್ರೀ ಸೀತಾರಾಮ ಕಲ್ಯಾಣೋತ್ಸವ ನಡೆಯಲಿದೆ.
* ಏ.13 ರಂದು ಮಧ್ಯಾಹ್ನ 12.30ಕ್ಕೆ ಭಗತ್ಸಿಂಗ್ ಕ್ರೀಡಾಂಗಣದಿಂದ ಬೃಹತ್ ಶೋಭಾ ಯಾತ್ರೆ ನಡೆಯಲಿದೆ. ಮೆರವಣಿಗೆಯಲ್ಲಿ ಭಾರತ ಮಾತೆ, ಶ್ರೀರಾಮ, ಹನುಮ, ಶಿವ, ಭುವನೇಶ್ವರಿ, ಅಂಬೇಡ್ಕರ್, ಶಿವಾಜಿ ಪ್ರತಿಮೆಗಳೊಂದಿಗೆ ವಿವಿಧ ಕಲಾತಂಡಗಳು ಭಾಗವಹಿಸಲಿವೆ. ನಂತರ ಕಾಸರಗೂಡಿನ ಕುಂಟಾರು ರವೀಶ್ ತಂತ್ರಿ ಅವರಿಂದ ದಿಕ್ಸೂಚಿ ಭಾಷಣ. ಸಂಜೆ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ಲೇಸರ್ ಶೋ, ಬೃಹತ್ ರಾವಣ ದಹನ ಮತ್ತು ಆಕರ್ಷಕ ಸಿಡಿಮದ್ದುಗಳ ಪ್ರದರ್ಶನ ಕಾರ್ಯಕ್ರಮಗಳು ನೆಡೆಯಲಿವೆ .
ಹಿಂದೂ ಸಮಾಜದ ಪ್ರತೀಕವಾಗಿ ಶಕ್ತಿ ತೋರಿಸುವ ಈ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಭಾಂದವರು ಭಾಗವಹಿಸಬೇಕೆಂದು ಈ ಮೂಲಕ ಮನವಿ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹ ಕಾರ್ಯದರ್ಶಿ ಭಾಸ್ಕರ್ ಭಗತ್, ನಗರ ಘಟಕದ ಅಧ್ಯಕ್ಷ ಮಧುಸೂದನ್, ತಾಲೂಕು ಸಂಯೋಜಕ ವಿರಾಜ್ ಮೊದಲಾದವರು ಹಾಜರಿದ್ದರು.