ದೊಡ್ಡ ಬಳ್ಳಾಪುರ : ವರ್ಷದ ಮಾರ್ಚಿ ಎಪ್ರಿಲ್ ಮೇ ತಿಂಗಳಲ್ಲಿ ಬರುವ ಹಲಸು ಫಲವು ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲಿ ಹೆಚ್ಚು ದೊರೆಯುತ್ತದೆಯಲ್ಲದೆ ಇದು ರೈತರಿಗೆ ಲಾಭದಾಯಕವಾದ ಬೆಳೆಯೂ ಆಗಿದೆ. ಈ ಪ್ರದೇಶದ ಹಲಸು ಹೆಚ್ಚು ರುಚಿಕರವಾಗಿದ್ದು, ಸಾರ್ವಜನಿಕರಿಗೆ ಇಷ್ಟವಾಗುವಂತೆ ಬಣ್ಣಗಳಿಂದ ಕೂಡಿರುತ್ತೆ. ಹಳದಿ, ಕೆಂಪು, ಸಾಧಾರಣ ಕೆಂಪು ತೂಳೆ ಗಳಿದ್ದು, ಅದರಲ್ಲೂ ವಿಶೇಷವಾಗಿ ಕೆಂಪು ತೂಳೆಯ ಬಣ್ಣದ ಹಲಸಿನ ಹಣ್ಣಿಗೆ ಭಾರಿ ಬೇಡಿಕೆಯಿದೆ.
ಹಸಿದು ಹಲಸು ತಿನ್ನು-ಉಂಡು ಮಾವು ತಿನ್ನು ಎಂದ ಗಾದೆ ಮಾತಿನಂತೆ ಹಲಸು ಹಣ್ಣಿನ ವಾಸನೆ ಹಾಗೂ ರುಚಿ ಗೆ ಮನ ಸೋಲದವರೆ ಇಲ್ಲ. ತಾಲ್ಲೂಕಿನ ತೂಬಗೆರೆ ಹೋಬಳಿ ಸುತ್ತ ಮುತ್ತಲಿನ ಕಾಚಹಳ್ಳಿ, ತೂಬಗೆರೆ, ನಾಗೆನಹಳ್ಳಿ, ನಾರಸಿಂಹಮ್ಮನಹಳ್ಳಿ, ಎದ್ದಲಹಳ್ಳಿ, ನೆಲ್ಲುಗುದಿಗೆ ಭಾಗದಲ್ಲಿ ಬೆಳೆದ ಹಲಸಸಿಗೆ ರುಚಿ ಹೆಚ್ಚು. ಅದರಲೂ ತೂಬಗೆರೆ ಕಾಚಹಳ್ಳಿ ಹಲಸು ಸಾಕಷ್ಟು ಪ್ರಸಿದ್ದಿ ಪಡೆದಿದೆ. ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಹಣ್ಣು ಸಂಗ್ರಹ ಮಾರಾಟಗಾರರು ದೊಡ್ಡಬಳ್ಳಾಪುರ ನಗರದ ಅಂಬೇಡ್ಕರ್ ವೃತ್ತ ಹಾಗೂ ಗೌರಿಬಿದನೂರು ರಸ್ತೆ ಬದಿಗಳಲ್ಲಿ ರಾಶಿ ಮಾಡಿಕೊಂಡು, ಆಂಧ್ರಪ್ರದೇಶದ ಹೈದರಾಬಾದ್, ಧರ್ಮಾವರಂ ಹಾಗೂ ತೆಲಂಗಾಣದ ತಿರುಪತಿಗೆ ರಫ್ತು ಮಾಡುತ್ತಾರೆ. ಅಲ್ಲಿ ಈ ಹಲಸಿಗೆ ಭಾರಿ ಬೇಡಿಕೆ ಇದೆ.

ಆದರೆ ದಲ್ಲಾಳಿಗಳ ಹಾವಳಿಯಿಂದ ವರ್ಷ ಪೂರ್ತಿ ಕಾದು ಬೆಳೆ ಬೆಳೆದ ರೈತರ ಶ್ರಮ ಕ್ಷಣಮಾತ್ರದಲ್ಲಿ ದಲ್ಲಾಳಿಗಳ ಪಾಲಾಗುವುದು ಕಂಡಾಗ ನೋವುಂಟಾಗುತ್ತದೆ. ಸಂಕಷ್ಟದಿಂದ ಕಂಗಾಲಾಗಿರುವ ರೈತರ ಸಮಸ್ಯೆ ಕೇಳುವವರಿಲ್ಲದಾಗಿದೆ. ಇದಕ್ಕೆ ಸರ್ಕಾರ ಸೂಕ್ತವಾದ ಮಾರುಕಟ್ಟೆ ಕಲ್ಪಿಸಿದರೆ, ಈ ಸಮಸ್ಯೆ ಬಗೆಹರಿಸಬಹುದು ಎಂಬುದು ರೈತರ ಕೂಗು. 100 ರೂ. ಬೆಲೆ ಬಾಳುವ ಒಂದು ಹಲಸಿನ ಹಣ್ಣಿಗೆ ದಲ್ಲಾಳಿಗಳು ಕೇವಲ 20-30 ರೂ. ಬೆಲೆ ಕಟ್ಟಿ ರೈತರಿಂದ ಕೊಂಡು, ಹೆಚ್ಚು ಲಾಭ ಗಳಿಸುತ್ತಿದ್ದಾರೆ. ಇದನ್ನು ತಪ್ಪಿಸಲು ರೈತರ ಬಗ್ಗೆ ಕಾಳಜಿ ವಹಿಸಿ ರೈತರಿಗೆ ನೆರವಾದರೆ ಅನ್ನದಾತರ ಬದುಕು ಕೊಂಚವಾದರೂ ಹಸನಾಗಬಹುದು ಅಲ್ಲವೇ…..
