
ದೊಡ್ಡಬಳ್ಳಾಪುರ : ಬೆಂಗಳೂರಿನ ವಸಂತನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನೆಡೆಯುತ್ತಿರುವ ಜನಕ್ರಾಂತಿ ಸಮಾವೇಶದಲ್ಲಿ ಭಾಗವಹಿಸಲು ನಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ 200ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಲಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಮೂರ್ತಿ ( ರಾಮು ನೆರಳೇಘಟ್ಟ ) ತಿಳಿಸಿದರು.
ನಗರದ ಪ್ರವಾಸಿ ಮಂದಿರ ಮುಂಭಾಗ ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟಿರುವ ಕಾರ್ಯಕರ್ತರ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು , ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 134ನೇ ಜನ್ಮದಿನದ ಅಂಗವಾಗಿ ಕೋಮುವಾದ ಧಿಕ್ಕರಿಸಿ- ಸಂವಿಧಾನ ರಕ್ಷಿಸಿ ಎಂಬ ಘೋಷ ವಾಕ್ಯದಡಿ ದಲಿತರ ಅಭಿವೃದ್ಧಿಗಾಗಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ. ನಂ. 47/74-75) ಹಮ್ಮಿಕೊಂಡಿರುವ ಜನಕ್ರಾಂತಿ ಸಮಾವೇಶದಲ್ಲಿ ಭಾಗವಹಿಸಲು ನಮ್ಮ ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಿಂದ ಸುಮಾರು 200ಕ್ಕೂ ಅಧಿಕ ಮಂದಿ ಎರಡು ಬಸ್ ಹಾಗೂ ಹಲವು ಖಾಸಗಿ ವಾಹನಗಳಲ್ಲಿ ತೆರಳುತ್ತಿದ್ದು ಸಾಂಕೇತಿಕವಾಗಿ ಬಸ್ ಗಳಿಗೆ ಚಾಲನೆ ನೀಡುವ ಮೂಲಕ ಬೃಹತ್ ಮಟ್ಟದಲ್ಲಿ ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದರು
-: ಪ್ರಮುಖ ಹಕ್ಕೊತ್ತಾಯಗಳು :-
1.ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ. ಬಿ.ಕೃಷ್ಣಪ್ಪನವರ ಜನ್ಮದಿನ ಜೂನ್ 19ನ್ನು ರಜೆ ರಹಿತ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವಂತೆ ಆದೇಶ ಹೊರಡಿಸಬೇಕು ಹಾಗೂ ಮರಣೋತ್ತರವಾಗಿ ಕನಾ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು.
2. ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದವರ (SCSP/TSP) ಉಪ ಯೋಜನೆಯಡಿ ಒದಗಿಸುವ ಆನುದಾನ ದುರ್ಬಳಕೆ ತಡೆಯಲು ಸೆಕ್ಷನ್ 7(D) ರದ್ದುಪಡಿಸಿದಂತೆ, ಸೆಕ್ಷನ್ 7(C)ಯನ್ನು ರದ್ದುಪಡಿಸಬೇಕು ಹಾಗೂ 2025-26ನೇ ಬಜೆಟ್ನಲ್ಲಿ ಘೋಷಿಸಲಾದ 42 ಸಾವಿರ ಕೋಟಿ ರೂಪಾಯಿ SCSP/TSP ಅನುದಾನವನ್ನು ಗ್ಯಾರಂಟಿ ಯೋಜನೆ ಸೇರಿದಂತೆ ಅನ್ಯ ಉದ್ದೇಶಕ್ಕೆ ಬಳಸದೆ ದಲಿತರ ಅಭಿವೃದ್ಧಿಗೆ ಬಳಕೆಯಾಗಬೇಕು.
3. ಬಗರ್ ಹುಕುಂ ಸಾಗುವಳಿದಾರರು ಸಲ್ಲಿಸಿರುವ ಅರ್ಜಿಗಳನ್ನು ಅನರ್ಹವೆಂದು ತಿರಸ್ಕರಿಸುವುದನ್ನು ನಿಲ್ಲಿಸಿ, ನಮೂನೆ 50, 53 ಹಾಗೂ 57 ರಡಿ ಸಲ್ಲಿಸಿರುವ ಅರ್ಜಿಗಳನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು ಹಾಗೂ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಭೂ ರಹಿತ ಬಡವರಿಗೆ ಸಾಗುವಳಿ ಚೀಟಿ ನೀಡಬೇಕು. ಸರಕಾರಿ ಜಾಗದಲ್ಲಿ ಬಹು ವರ್ಷಗಳಿಂದ ನೆಲೆಸಿರುವ ಕುಟುಂಬಗಳಿಗೆ 94ಸಿ ಹಾಗೂ 94ಸಿಸಿ ಅಕ್ರಮ ಸಕ್ರಮದಡಿ ಕಾಯಂಗೊಳಿಸಿ ಹಕ್ಕು ಪತ್ರ ನೀಡಬೇಕು.
4. ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ವಿಧವಾ ವೇತನ, ದೇವದಾಸಿ ವೇತನ, ವಿಕಲ ಚೇತನರಿಗೆ ಹಾಗೂ ಸಂಧ್ಯಾಸುರಕ್ಷಾ ಯೋಜನೆಯಡಿ ನೀಡುತ್ತಿರುವ ಮಾಶಾಸನ ರೂ. 3,000 ವರೆಗೆ ಹೆಚ್ಚಳ ಮಾಡಬೇಕು.
5. ಭೂ ರಹಿತ ದೇವದಾಸಿ ಮತ್ತು ವಿಧವಾ ಮಹಿಳೆಯರಿಗೆ ತಲಾ ಕನಿಷ್ಠ 3.00 ಎಕರೆ ಜಮೀನು ಮಂಜೂರು ಮಾಡಬೇಕು.
6. ಗುಡಿಸಲು ಮನೆಗಳು ಹಾಗೂ ಖಾಲಿ ನಿವೇಶನ ಹೊಂದಿರುವ ಬಡವರು ಮನೆ ಕಟ್ಟಿಕೊಳ್ಳಲು ರೂ.6.00 ಲಕ್ಷ ಸಹಾಯಧನ ನೀಡಬೇಕು.
7. ವಸತಿ ರಹಿತ, ನಿದೇಶನ ರಹಿತ ಹಾಗೂ ಭೂ ರಹಿತ ಕುಟುಂಬಗಳನ್ನು ಮನೆ ಮನೆ ಸಮೀಕ್ಷೆ ನಡೆಸಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ವಸತಿ, ನಿವೇಶನ ಹಾಗೂ ಭೂಮಿ ಸೌಲಭ್ಯ ಕಲ್ಪಿಸಲು ವಸತಿ ಆಯೋಗ ಸ್ಥಾಪಿಸಬೇಕು.
8. SC/ST/OBC ವರ್ಗದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಅಲೆಮಾರಿ ಆಯೋಗ ಸ್ಥಾಪಿಸಬೇಕು.
9. ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮ, ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ, ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಗಳು ಅನುಷ್ಠಾನಗೊಳಿಸುತ್ತಿರುವ ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಸ್ವಾವಲಂಬಿ ಸಾರಥಿ ಸೇರಿದಂತೆ ಇತರೆ ಸಾಲ ಸೌಲಭ್ಯಗಳ ಯೋಜನೆಗಳಡಿ ಫಲಾನುಭವಿಗಳು ಸಲ್ಲಿಸಿರುವ ಅರ್ಜಿಗಳ ಬೇಡಿಕೆಗನುಗುಣವಾಗಿ ಅನುದಾನ ಒದಗಿಸಬೇಕು.
10. ಬೆಲೆ ಏರಿಕೆಗೆ ತಕ್ಕಂತೆ ಸರ್ಕಾರಿ ಹಾಗೂ ಅನುದಾನಿತ ವಸತಿ ನಿಲಯಗಳ ವಿದ್ಯಾರ್ಥಿಗಳ ಮಾಸಿಕ ಭೋಜನಾ ವೆಚ್ಚವನ್ನು ರೂ.3.000 ವರೆಗೆ ಹೆಚ್ಚಳ ಮಾಡಬೇಕು.
11. ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ಹೊರಸಂಪನ್ಮೂಲದಡಿ ದುಡಿಯುತ್ತಿರುವ ದಿನಗೂಲಿ ನೌಕರರನ್ನು ಖಾಯಂ ಗೊಳಿಸಬೇಕು. ಅವರಿಗೆ ಸಿಗಬೇಕಾದ ವೇತನ, ಭತ್ಯೆ ಸೇರಿದಂತೆ ಇತರೆ ಹಿಂಬಾಕಿ ವೇತನವನ್ನು ನಿಯಮ ಬದ್ಧವಾಗಿ ನೀಡಬೇಕು.
12. ಮ್ಯಾನೇಜ್ಮೆಂಟ್ ಕೋಟಾದಡಿ ಪ್ರವೇಶ ಪಡೆದ ಕಾಲೇಜ್ ವಿದ್ಯಾರ್ಥಿಗಳಿಗೆ ಸರಕಾರಿ ವಸತಿ ನಿಲಯಗಳಲ್ಲಿ ಪ್ರವೇಶ ಕಲ್ಪಿಸಬೇಕು ಹಾಗೂ ವಿದ್ಯಾರ್ಥಿ ವೇತನ ಮಂಜೂರು ಮಾಡಬೇಕು.
13. ಕರ್ನಾಟಕ ರಾಜ್ಯದ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(APMC)ಗಳಲ್ಲಿ SC/ST ಗಳಿಗೆ ಮೀಸಲಿರಿಸಿದ ವ್ಯಾಪಾರ ಮಳಿಗೆಗಳ ಠೇವಣಿ ಮತ್ತು ಮಾಸಿಕ ಬಾಡಿಗೆ ಮೊತ್ತದಲ್ಲಿ ಶೇಕಡ 50 ರಷ್ಟು ರಿಯಾಯಿತಿ ನೀಡಬೇಕು.
14. ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ NHM ನೌಕರರನ್ನು ಖಾಯಂ ಗೊಳಿಸಬೇಕು.
15. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಸರಳ ಸಾಮೂಹಿಕ ವಿವಾಹಗಳಿಗೆ ನೀಡುತ್ತಿರುವ ಪ್ರೋತ್ಸಾಹ ಧನ ರೂ. 50,000 ಬದಲಿಗೆ ರೂ. 1.00 ಲಕ್ಷ ವರೆಗೆ ಹೆಚ್ಚಿಸಬೇಕು.
ನಮ್ಮ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಶಿವಮೊಗ್ಗ ರವರ ನೇತೃತ್ವದಲ್ಲಿ ಈ ಜನಾಕ್ರಾಂತಿ ಸಮಾವೇಶವನ್ನು ಹಮ್ಮಿಕೊಂಡಿದ್ದು , ಪ್ರಮುಖ ಹಾಕ್ಕೋತ್ತಾಯಗಳನ್ನು ಸರ್ಕಾರಕ್ಕೆ ತಲುಪಿಸಲಿದ್ದೇವೆ, ದಲಿತರ ಅಭಿವೃದ್ಧಿಗಾಗಿ ನಮ್ಮ ತಂಡ ಸದಾ ಶ್ರಮಿಸಲಿದೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು.