
ದೊಡ್ಡಬಳ್ಳಾಪುರ : ತಾಲ್ಲೂಕಿನ ಬಾಶೆಟ್ಟಿಹಳ್ಳಿ ರಸ್ತೆಯಿಂದ ವೀರಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಊರಿನ ದ್ವಾರ ಬಾಗಿಲು ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ವೀರಾಪುರ ಗ್ರಾಮಕ್ಕೆ 2025-26 ನೇ ಸಾಲಿನ ಮ್ಯಾಕ್ ಏರೋ ಕಾಂಪೋನೆಂಟ್ಸ್ ಕಾರ್ಖಾನೆಯ ಸಿ.ಎಸ್. ಆರ್. ಯೋಜನೆಯಡಿ ನಿರ್ಮಿಸಲಾದ ಸಮುದಾಯ ಭವನವನ್ನು ಶನಿವಾರ ಶಾಸಕ ಧೀರಜ್ ಮುನಿರಾಜು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಬೃಹತ್ ಕಂಪನಿಗಳು ಸ್ಥಳೀಯವಾಗಿ ಸಾರ್ವಜನಿಕ ಉಪಯೋಗಿ ಕಾರ್ಯಗಳಿಗೆ ಸಹಕಾರ ನೀಡುವುದರಿಂದ ಕಂಪನಿ ಮತ್ತು ಸ್ಥಳೀಯರೊಂದಿಗೆ ಉತ್ತಮ ಸಂಬಂಧ ವೃದ್ಧಿಯಾಗುತ್ತದೆ. ಈ ಮೂಲಕ ಆಯಾ ಪಂಚಾಯತಿಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಮ್ಯಾಕ್ ಏರೋ ಕಾಂಪೋನೆಂಟ್ಸ್ ಕಂಪನಿಯ ಸಹಕಾರದಿಂದ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿರುವುದರಿಂದ ಇಲ್ಲಿನ ಸಾವಿರಾರು ಜನರಿಗೆ ಶುಭಸಮಾರಂಭಗಳಿಗೆ ಅನುಕೂಲವಾಗಲಿದೆ ಎಂದರು.
ಹಿರಿಯ ಮುಖಂಡ ತಿ.ರಂಗರಾಜಣ್ಣ ಮಾತನಾಡಿ ಗ್ರಾಮಗಳ ಅಭಿವೃದ್ಧಿಗೆ ದೊಡ್ಡ ದೊಡ್ಡ ಕಂಪನಿಗಳು ಸಿ.ಎಸ್.ಆರ್ ನಿಧಿಯಡಿ ಹಣವನ್ನು ಮೀಸಲಿಟ್ಟು ಮೂಲಭೂತ ಸೌಕರ್ಯಗಳಿಗೆ ಬಳಕೆ ಮಾಡುತ್ತಿರುವುದರಿಂದ ಅನೇಕ ಯೋಜನೆಗಳು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ರಂಗರಾಜು, ಬಿಸಿ ಆನಂದ್, ಕೃಷ್ಣಪ್ಪ, ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಲೀಲಮ್ಮ ಪಿಳ್ಳೇಗೌಡ, ಸದಸ್ಯರಾದ ವಿಜಯಕುಮಾರ್, ಶಿವಕುಮಾರ, ವಿಮಲಾ, ಪಿಳ್ಳಾಂಜಿನಪ್ಪ, ಸಂದೇಶ್, ಮ್ಯಾಕ್ ಏರೋ ಕಾಂಪೋನೆಂಟ್ಸ್ ಕಾರ್ಖಾನೆಯ ಅಧಿಕಾರಿಗಳು ಇದ್ದರು.