
ಇತ್ತೀಚಿಗೆ ರಾಜ್ಯಾದ್ಯಂತ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಅದರಲ್ಲೂ ರೌಡಿಶೀಟರ್ ಗಳು ಹೆಚ್ಚಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಹಿನ್ನೆಲೆ ಇಂದು ದೊಡ್ಡಬಳ್ಳಾಪುರ ಡಿವೈಎಸ್ ಪಿ ಉಪವಿಭಾಗದಲ್ಲಿ ರೌಡಿ ಪರೇಡ್ ನಡೆಸಲಾಯಿತು.
ಇಂದು ನಗರದ ಡಿವೈಎಸ್ ಪಿ ಕಚೇರಿ ಆವರಣದಲ್ಲಿ ಎಎಸ್ ಪಿ-2(ಅಪರಾಧ ವಿಭಾಗ) ಕೆ.ಎಸ್ ನಾಗರಾಜ್ ಅವರ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ಡಿವೈಎಸ್ಪಿ ಉಪವಿಭಾಗಕ್ಕೆ ಒಳಪಡುವ ದೊಡ್ಡಬಳ್ಳಾಪುರ ಗ್ರಾಮಾಂತರ, ದೊಡ್ಡಬಳ್ಳಾಪುರ ನಗರ, ಹೊಸಹಳ್ಳಿ, ದೊಡ್ಡಬೆಳವಂಗಲ, ವಿಜಯಪುರ, ವಿಶ್ವನಾಥಪುರ, ಚೆನ್ನರಾಯಪಟ್ಟಣ, ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಗಳ ಪರೇಡ್ ಹಮ್ಮಿಕೊಳ್ಳಲಾಗಿತ್ತು.
ರೌಡಿ ಪರೇಡ್ ನಡೆಸಿ ಮಾಧ್ಯಮದವರೊಂದಿಗೆ ಎಎಸ್ ಪಿ-2(ಅಪರಾಧ ವಿಭಾಗ) ಕೆ.ಎಸ್ ನಾಗರಾಜ್ ಮಾತನಾಡಿ, ದೊಡ್ಡಬಳ್ಳಾಪುರ ಡಿವೈಎಸ್ಪಿ ಉಪವಿಭಾಗದಲ್ಲಿ ಸುಮಾರು 248 ರೌಡಿಶೀಟರ್ ಗಳು ಇದ್ದಾರೆ. ಅದರಲ್ಲಿ ಇಂದು ನಡೆದ ರೌಡಿ ಪರೇಡ್ ನಲ್ಲಿ 118 ಮಂದಿ ಹಾಜರಾಗಿದ್ದರು. ಇನ್ನು ಕೆಲವರು ಗೈರಾಗಿದ್ದಾರೆ. ಹಲವರಿಗೆ ಅನಾರೋಗ್ಯ ಕಾರಣದಿಂದ ಬಂದಿಲ್ಲ, ಮತ್ತೆ ಕೆಲವರು ಜೈಲಿನಲ್ಲಿದ್ದಾರೆ. ಇದರಲ್ಲಿ 25 ಜನ ಕೊಲೆ ಆರೋಪಿಗಳಿದ್ದಾರೆ ಎಂದರು.
ಉದ್ದೇಶ ಪೂರ್ವಕವಾಗಿ ಕಾನೂನಿನ ಭಯವಿಲ್ಲದೇ ಜನಸಾಮಾನ್ಯರಿಗೆ ತೊಂದರೆ ನೀಡುವವರನ್ನು ರೌಡಿಪಟ್ಟಿಗೆ ಸೇರಿಸಲಾಗಿದೆ. ಕೆಲವರಿಗೆ ತಾನು ಮಾಡಿರುವ ತಪ್ಪು ಅರಿವಿಗೆ ಬಂದಿದ್ದು, ಮತ್ತೆ ಕೆಲವರಿಗೆ ಇನ್ನೂ ತಿಳುವಳಿಕೆ ಬರದೇ ಪುನರಾರ್ವತಿತವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಅಂತವರಿಗೆ ಮತ್ತಷ್ಟು ಕಾನೂನಿನ ಕಠಿಣ ಶಿಕ್ಷೆ ವಿಧಿಸಲಾಗುವುದು. ಗಡಿಪಾರು ಸಹ ಮಾಡಲಾಗುವುದು ಎಂದು ಅವರು ತಿಳಿಸಿದರು.
ರೌಡಿ ಶೀಟರ್ಗಳು ಯಾವುದೇ ಕಾರಣಕ್ಕೂ ಸಮಾಜಘಾತುಕ ಕೃತ್ಯಗಳಲ್ಲಿ ಪಾಲ್ಗೊಳ್ಳಬಾರದು. ಅಂತಹ ಕೃತ್ಯಗಳಿಗೂ ಸಹ ಕುಮ್ಮಕ್ಕು ನೀಡಬಾರದು. ಒಂದು ವೇಳೆ ತಪ್ಪು ಮಾಡಿದ್ದು ಕಂಡುಬಂದರೆ ತಕ್ಕ ಶಿಕ್ಷೆ ನೀಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು ಅಲ್ಲದೇ ರೌಡಿ ಶೀಟರ್ ಓಪನ್ ಮಾಡೋದಕ್ಕೆ ಕೇವಲ ಒಂದು ಗಂಟೆ ಸಾಕು, ಆದರೆ, ರೌಡಿ ಪಟ್ಟಿಯಿಂದ ಹೆಸರು ತೆಗೆಯುವುದಕ್ಕೆ ಹಲವು ವರ್ಷಗಳೇ ಬೇಕಾಗುತ್ತದೆ. ಆದ್ದರಿಂದ ಯಾರೂ ಸಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು ಎಂದರು.
ಯಾವ ಅಪರಾಧದಲ್ಲಿ ಭಾಗಿಯಾಗದೇ ಸನ್ನಡತೆಯಿಂದ ಜೀವನ ಸಾಗಿಸುತ್ತಿರುವ ಹಾಗೂ 60 ವರ್ಷ ಮೇಲ್ಪಟ್ಟವರ ರೌಡಿಶೀಟರ್ ಗಳ ಚಲನವಲನ ಗಮನಿಸಿ ರೌಡಿ ಪಟ್ಟಿಯಿಂದ ಹೆಸರು ತೆಗೆಯಲಾಗುವುದು.ನಿರಂತರ ಹತ್ತು ವರ್ಷ ಸಮಾಜದಲ್ಲಿ ಯಾರ ನೆಮ್ಮದಿಗೂ ಧಕ್ಕೆ ತರದಂತೆ ಜೀವನ ನಡೆಸಬೇಕು. ದೂರುಗಳೂ ಬರದಂತೆ ಇರಬೇಕು. ಹಾಗೆ ಮಾಡಿದರೆ ಮಾತ್ರ ರೌಡಿಶೀಟರ್ನಿಂದ ತೆರವು ಮಾಡುತ್ತೇವೆ ಎಂದು ಹೇಳಿದರು.
ಪೊಲೀಸ್ ಠಾಣೆವಾರು ರೌಡಿಶೀಟರ್ಗಳ ಸಂಖ್ಯೆ
1.ದೊಡ್ಡಬಳ್ಳಾಪುರ ಗ್ರಾಮಾಂತರ- 52
2.ದೊಡ್ಡಬಳ್ಳಾಪುರ ನಗರ- 51
3.ಹೊಸಹಳ್ಳಿ- 10
4.ದೊಡ್ಡಬೆಳವಂಗಲ- 25
5.ವಿಜಯಪುರ- 30
6.ವಿಶ್ವನಾಥಪುರ- 22
7.ಚೆನ್ನರಾಯಪಟ್ಟಣ- 11
8.ರಾಜಾನುಕುಂಟೆ- 47
ಈ ವೇಳೆ ಡಿವೈಎಸ್ಪಿ ರವಿ.ಪಿ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಾದಿಕ್ ಪಾಷಾ, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ, ಹೊಸಹಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾವ್ ಗಣೇಶ್, ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಕಲ್ಲಪ್ಪ ಶಂಕರಪ್ಪ ಖರಾತ್ ಸೇರಿದಂತೆ ವಿಜಯಪುರ, ವಿಶ್ವನಾಥಪುರ, ಚೆನ್ನರಾಯಪಟ್ಟಣ, ರಾಜಾನುಕುಂಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಗಳು ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.