
ದೊಡ್ಡಬಳ್ಳಾಪುರ: ಸಮಾಜದಲ್ಲಿ ಸಮುದಾಯಗಳ ಸಂಘಗಳನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋದಾಗ ಮಾತ್ರ ಪರಿಪೂರ್ಣತೆ ಸಿಗುತ್ತದೆ. ಸಂಘದ ಜೊತೆ ಸಮುದಾಯದ ಪ್ರತಿಯೊಬ್ಬರು ಒಡನಾಟ ಇಟ್ಟುಕೊಳ್ಳುವ ಮೂಲಕ ಸಂಘವನ್ನು ಬೆಳಸಬೇಕು ಎಂದು ತಿಪಟೂರಿನ ಶನೇಶ್ವರ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ತಿಳಿಸಿದರು.
ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ತಿಗಳ ಕ್ಷತ್ರೀಯ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು ಸಮಾಜದ ಯುವ ಜನತೆಯ ಶಿಕ್ಷಣ ಮಟ್ಟವನ್ನು ಹೆಚ್ಚಿಸಬೇಕು. ಕೇವಲ ಕೃಷಿಯನ್ನು ಮಾತ್ರ ನಂಬಿ ಜೀವನ ಮಾಡುವುದು ಕಷ್ಟಕರವಾಗಿದೆ. ಎಲ್ಲಾ ರಂಗದಲ್ಲಿಯೂ ಮುಂದುವರೆಯುವ ಅಗತ್ಯತೆ ಸೃಷ್ಟಿಯಾಗಿದೆ ಎಂದರು.
ಶಾಸಕ ಧೀರಜ್ ಮುನಿರಾಜು ಮಾತನಾಡಿ ತೋಟಗಾರಿಕೆ ಕೃಷಿಯ ಬಗ್ಗೆ ಅಧ್ಯಯನ ಮಾಡಬೇಕಾದರೆ ತಿಗಳ ಸಮುದಾಯದವರನ್ನ ಕೇಳಿ ತಿಳಿದುಕೊಳ್ಳುವಷ್ಟು ನಿಪುಣರಾಗಿದ್ದಾರೆ. ಕೊಟ್ಟ ಮಾತನ್ನ ಉಳಿಸಿಕೊಳ್ಳುವಂತ ಸಮಾಜ ತಿಗಳ ಸಮುದಾಯವಾಗಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಖ್ಯವಾಗಿ ಸಮಗ್ರ ಕೃಷಿ ಮಾಡುವಲ್ಲಿ ನಿಪುಣರಾಗಿದ್ದಾರೆ. ಸಮಾಜದ ಅಭಿವೃದ್ಧಿಗೆ ಜಮೀನು ಮಂಜೂರು ಮಾಡಲು ಹಿಂದುಳಿದ ವರ್ಗದ ಅಧಿಕಾರಿಗಳು, ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗುವುದು ಎಂದರು.
ಮಾಜಿ ಶಾಸಕ ನೆ.ಲ ನರೇಂದ್ರಬಾಬು ಮಾತನಾಡಿ ಸಮಾಜದ ಅಭಿವೃದ್ಧಿಯ ಕಾರ್ಯಕ್ರಮಗಳಿಗೆ ಶಾಸಕರು 10 ಎಕರೆ ಜಮೀನು ಮೀಸಲಿಡಬೇಕು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ವಿರೋಧ ಪಕ್ಷದ ನಾಯಕ ಬಸವರಾಜು, ಜೆಡಿಎಸ್ ಮುಖಂಡ ಮುನೇಗೌಡ, ಸಂಘದ ಅಧ್ಯಕ್ಷ ಮುದ್ದಪ್ಪ, ಉಪಾಧ್ಯಕ್ಷ ನಾರಾಯಣಪ್ಪ, ಗೋವಿಂದಗೌಡ, ಲಕ್ಷ್ಮೀನಾರಾಯಣ, ರಾಜಣ್ಣ, ಬಸವರಾಜು, ಡಿಪಿಎ ಮಾಜಿ ಸದಸ್ಯ ಆನಂದಮೂರ್ತಿ, 18ಗಡಿ ಯಜಮಾನರಾದ ಜಗದೀಶ್, ಯಜಮಾನ್ ನೆಲಮಂಗಲ ಉಮೇಶ್ ಸೇರಿದಂತೆ ದೊಡ್ಡಬಳ್ಳಾಪುರ ತಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಹಾಜರಿದ್ದರು.