ದೊಡ್ಡಬಳ್ಳಾಪುರ : ಕಳೆದ ಸೋಮವಾರ ಆರೂಢಿ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಸಿಬ್ಬಂದಿಗಳು ಬನವತಿ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಸಂತ್ರಸ್ತೆಯ ಮನೆಯನ್ನು ನೆಲಸಮ ಮಾಡಿದ್ದರು , ಈ ಸ್ವತ್ತು ಗ್ರಾಮ ಪಂಚಾಯಿತಿ ಸ್ವತ್ತಾಗಿದ್ದು, ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ ಎಂದು ನಾಮಫಲಕ ಹಾಕಿದ್ದರು , ಕಳೆದ ಮೂರು ದಿನಗಳಿಂದ ಚಳಿ,ಮಳೆ,ಗಾಳಿಯಲ್ಲೇ ಇಡೀ ಕುಟುಂಬ ರಾತ್ರಿ ಕಳೆದಿದ್ದು, ತಾಲೂಕು ದಂಡಾಧಿಕಾರಿಗಳು, ಉಪ ವಿಭಾಗ ಅಧಿಕಾರಿಗಳು ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತೆ ಹಾಗೂ ಪುಟ್ಟ ಮಕ್ಕಳನ್ನು ಸಾಂತ್ವನಕ್ಕೇನ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಏನಿದು ಘಟನೆ
ತಾಲೂಕಿನ ಬನವತಿ ಗ್ರಾಮದಲ್ಲಿ ಬಲಾಢ್ಯನ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ಥ ಮಹಿಳೆ ಪೊಲೀಸರ ರಕ್ಷಣೆಯ ನಂಬಿಕೆಯ ಮೇಲೆ ಗ್ರಾಮದಲ್ಲಿ ವಾಸವಾಗಿದ್ದರು,ಆ ಕುಟುಂಬ ವಾಸವಾಗಿದ್ದ ಮನೆ ಗ್ರಾಮಠಾಣಾಗೆ ಸೇರಿತ್ತು, ಇದೇ ನೆಪ ಇಟ್ಕೊಂಡು ಆರೂಢಿ ಗ್ರಾಮ ಪಂಚಾಯಿತಿ ಸಂತ್ರಸ್ತೆಯ ಮನೆಯನ್ನು ನೆಲಸಮ ಮಾಡಿದೆ, ಬಡ ಕುಟುಂಬಕ್ಕೆ ಆಸರೆಯಾಗಿದ್ದ ಮನೆ ಕಳೆದುಕೊಂಡ ಆ ಸಂತ್ರಸ್ತೆಯ ಕುಟುಂಬ ಬೀದಿಗೆ ಬಂದಿದೆ.
ಬನವತಿ ಗ್ರಾಮದ ಸಂತ್ರಸ್ಥೆ ಬದುಕು ಕರುಣಾಜನಕವಾಗಿದೆ, ಗ್ರಾಮದ ಬಲಾಢ್ಯನಿಂದ ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಆಕೆ, ಸಂತ್ವಾನ ಕೇಂದ್ರದಿಂದ ಬಂದು ಮತ್ತೆ ಎತ್ತಿನಂದೆ ಗಂಡ ಮಕ್ಕಳ ಜೊತೆಯಲ್ಲಿ ಬದುಕು ಕಟ್ಟಿಕೊಳ್ಳಲು ಪ್ರಾರಂಭಿಸಿದ್ದರು , ಆ ಕುಟುಂಬಕ್ಕೆ ಆಶ್ರಯ ನೀಡಬೇಕಾದ ಆರೂಢಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು, ಗ್ರಾಮಠಾಣಾಕ್ಕೆ ಸೇರಿದ ಜಾಗದಲ್ಲಿ ಅನಧಿಕೃತವಾಗಿ ವಾಸವಾಗಿದ್ದಾರೆಂದು ತೆರವು ಕಾರ್ಯಚರಣೆ ನಡೆಸಿದ್ದಾರೆ.

ಆರೂಢಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಈ ಗುಡಿಸಲನ್ನು ತೆರವುಗೊಳಿಸಿದ್ದಾರೆ, ಈ ಸ್ವತ್ತು ಗ್ರಾಮ ಪಂಚಾಯಿತಿ ಸ್ವತ್ತಾಗಿದ್ದು, ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ…. ಪ್ರಕಟಣೆ ಆರೂಢಿ ಗ್ರಾಮ ಪಂಚಾಯಿತಿ” ಎಂಬ ಬರಹದ ಫಲಕವನ್ನು ನೆಟ್ಟು ಹೋಗಿದ್ದಾರೆ. ಈ ವಿಚಾರ ತಿಳಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನ ಸಂಚಾಲಕ ನೆಲಮಂಗಲ ಬಸವರಾಜು, ಜಿಲ್ಲಾ ಸಂಚಾಲಕ ರಾಮಮೂರ್ತಿ(ರಾಮು ನೇರಳೇಘಟ್ಟ) ನಿರಾಶ್ರಿತ ಕುಟುಂಬದ ನೆರವಿಗೆ ಧಾವಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ನೆಲಮಂಗಲ ಬಸವರಾಜು, ಗ್ರಾಮದಲ್ಲಿನ ಪ್ರಬಲ ಜಾತಿ ಯುವಕನ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂಸ್ರಸ್ತೆ ಮತ್ತು ಆಕೆಯ ಕುಟಂಬ ಈಗತ್ತಾನೆ ಚೇತರಿಸಿಕೊಳ್ಳುತ್ತಿದೆ. ಈ ಘಟನೆಯಿಂದ ಆಕೆಯ ಸಂಬಂಧಿಕರು ಯಾರು ಮನೆಯೊಳಗೆ ಸೇರಿಸುತ್ತಿಲ್ಲ. ಮನೆಯಿಂದ ಹೊರಹಾಕಿದ್ದಾರೆ. ಒತ್ತುವರಿ ತೆರವು ಕಾರ್ಯಾಚರಣೆ ಮಾಡುವ ಮುನ್ನ ಸಂತ್ರಸ್ತೆ ಕುಟುಂಬಕ್ಕೆ ನೋಟಿಸ್ ನೀಡಬೇಕು, ಇಲ್ಲಿ ಯಾವುದೇ ನೋಟಿಸ್ ನೀಡಿಲ್ಲ, ಯಾವ ನೋಟಿಸ್ ನೀಡದೇ ಆಕೆ ವಾಸ ಮಾಡುತ್ತಿರುವ ಗುಡಿಸಲು ನೆಲಸಮ ಮಾಡಿದ್ದಾರೆ ಎಂದು ಆರೋಪಿಸಿದರು

ಇದರ ನೇರ ಹೊಣೆ ಪಿಡಿಒ, ಪಿಡಿಓ ಕ್ರಮದ ವಿರುದ್ಧ ನಾವು ಪೊಲೀಸ್ ದೂರು ನೀಡಲಿದ್ದೇವೆ . ಆ ಕುಟುಂಬಕ್ಕೆ ನಿವೇಶನ ಮತ್ತು ಮನೆಯನ್ನು ನೀಡುವುದರ ಜೊತೆಗೆ ರಕ್ಷಣೆಯನ್ನು ಕಲ್ಪಿಸಬೇಕು ಇಲ್ಲದಿದ್ದಾರೆ ನಮ್ಮ ಸಂಘಟನೆ ವತಿಯಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂತ್ರಸ್ತೆ ಗಂಡ ರವಿಕುಮಾರ್ ಮಾತನಾಡಿ, ನಾವು ಕೂಲಿ ಮಾಡಿ ಜೀವನ ನಡೆಸುತ್ತಿದ್ದೇವೆ. ಗ್ರಾಮ ಠಾಣಾಗೆ ಸೇರಿದ ಈ ಜಾಗದಲ್ಲಿ ಕಳೆದ 5 ವರ್ಷಗಳಿಂದ ವಾಸವಾಗಿದ್ದೇವೆ, ನಮ್ಮಂತೆ ಗ್ರಾಮದ ಬಹುತೇಕ ಕುಟುಂಬಗಳು ಇದೇ ಜಾಗದಲ್ಲಿ ಮನೆಗಳನನ್ನು ಕಟ್ಟಿಕೊಂಡಿದ್ದಾರೆ, ಹೊಲ ಜಮೀನು ಮಾಡಿಕೊಂಡಿದ್ದಾರೆ, ಒತ್ತುವರಿ ತೆರವು ಮಾಡುವುದಾದರೆ ಎಲ್ಲರನ್ನು ತೆರವು ಮಾಡಬೇಕು, ಬಡವರಾದ ನಮ್ಮ ಮೇಲೇಕೆ ಗ್ರಾಮ ಪಂಚಾಯಿತಿ ನಿರ್ದಾಕ್ಷಿಣ ಕ್ರಮ, ಏಕಾಏಕಿ ಬಂದು ನಮ್ಮನ್ನು ಗುಡಿಸಲಿನಿಂದ ಹೊರ ದಬ್ಬಿ, ಮನೆಯಲ್ಲಿದ್ದ ವಸ್ತುಗಳನ್ನು ಹೊರಹಾಕಿ ಗುಡಿಸಲನ್ನು ನೆಲಸಮ ಮಾಡಿದ್ದಾರೆ. ನಮಗೆ ಆಶ್ರಯ, ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಮತ್ತು ಅಧಿಕಾರಿಗಳ ತಂಡ, ಸಂತ್ರಸ್ತೆ ಮತ್ತು ಆಕೆಯ ಮಕ್ಕಳು ಬೀದಿಯಲ್ಲಿ ಇರುವುದು ಸುರಕ್ಷಿತವಲ್ಲ, ಕಾಡು ಪ್ರಾಣಿಗಳು ಮತ್ತು ಪುಂಡಪೋಕರಿಗಳ ಕಾಟ ಇದೆ, ಸಂತ್ರಸ್ತೆಯ ಮನವೊಲೈಸಿದ ಅಧಿಕಾರಿಗಳ ತಂಡ ಸಂತ್ವಾನ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ, ಜೊತೆಯಲ್ಲಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ.
ಆರೂಢಿ ಗ್ರಾಮ ಪಂಚಾಯಿತಿ ಪಿಡಿಓ ಮಲ್ಲೇಶ್ ಮಾತನಾಡಿ, ರವಿಕುಮಾರ್ ರವರಿಗೆ ಗ್ರಾಮದಲ್ಲಿ ಖಾಲಿ ನಿವೇಶನ ಇದ್ದು, ಆ ಸ್ಥಳದಲ್ಲೇ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಡಲಾಗುವುದು, ನಿವೇಶನದಲ್ಲಿ ಮನೆ ಕಟ್ಟಿಕೊಳ್ಳಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಅನುದಾನ ನೀಡುವುದ್ದಾಗಿ ಹೇಳಿದ್ದಾರೆ.
