
ಸಭೆಯಲ್ಲಿ ಪ್ರಮುಖವಾಗಿ ವೃಷಭಾವತಿ ನೀರು ತಾಲೂಕಿಗೆ ಹರಿಸುವ ಕುರಿತು ಹಾಗೂ ಎಂ ಎಸ್ ಜಿ ಪಿ ಕಸ ವಿಲೇವಾರಿ ಘಟಕದ ವಿರುದ್ಧ ಹೋರಾಟ ಕುರಿತಂತೆ ತಾಲೂಕಿನ ಎಲ್ಲಾ ಹಂತದ ಜನಪ್ರತಿನಿಧಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಸಲಾಗಿದೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಹಾಗೂ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಧೀರಜ್ ಮುನಿರಾಜು ತಿಳಿಸಿದರು.
ನಗರದ ಡಾ.ಬಾಬುಜಗಜೀವನ್ ರಾಂ ಭವನದಲ್ಲಿ ಶನಿವಾರ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ, ನಗರ ಸಭೆ, ತಾಲ್ಲೂಕು ಚುನಾಯಿತ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರ ಸಮಾಲೋಚನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಳೆದ ಎರಡು ವರ್ಷಗಳಲ್ಲಿ ಬಿಬಿಎಂಪಿ ವತಿಯಿಂದ ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅನುದಾನವನ್ನು ಪಡೆಯದೆ ಕಸ ಹಾಕುವುದನ್ನು ನಿಲ್ಲಿಸುವಂತೆ ಅಗ್ರಹ ಮಾಡುತ್ತಿದ್ದೇನೆ . ನಮ್ಮ ತಾಲ್ಲೂಕಿಗೆ ಸದಾ ತಂದು ಸುರಿಯುತ್ತಿರುವ ಕಸ ನಿಲ್ಲಬೇಕು ಎಂಬುದೇ ನನ್ನ ಹೋರಾಟ ಎಂದರು.
ಬಿಬಿಎಂಪಿ ಕಸದಿಂದಾಗಿ ದೊಡ್ಡಬೆಳವಂಗಲ ಹಾಗೂ ಸಾಸಲು ಭಾಗದ ಹತ್ತಾರು ಗ್ರಾಮಗಳ ಅಂತರ್ಜಲ ಸಂಪೂರ್ಣ ಕಲುಷಿತಗೊಂಡು ಜನರು ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಜಾನುವಾರುಗಳು ಸಾಯುತ್ತಿವೆ. ಕಲುಷಿತ ನೀರಿನ ಬಳಕೆಯಿಂದ ಬೆಳೆಗಳು ಹಾಳಾಗಿ ರೈತರು ಶಾಪ ಹಾಕುತ್ತಿದ್ದಾರೆ. ಇದರ ವಿರುದ್ಧ ಈಗಾಗಲೇ ಹಲವಾರು ರೈತರು, ಮುಖಂಡರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರುಗಳನ್ನು ದಾಖಲಿಸಿದ್ದಾರೆ.ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕುರಿತು ಈಗಾಗಲೇ ವರದಿ ಸಲ್ಲಿಸಿದ್ದು. ಸ್ಥಳೀಯ ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಘಟಕ ಮುಚ್ಚುವಂತೆ ನಿರ್ಣಯ ಅಂಗೀಕರಿಸಿದ್ದಾರೆ ಎಂದರು.
ತಾಲ್ಲೂಕಿನಲ್ಲಿ ಕಸ ವಿಲೇವಾರಿ ಘಟಕವು 2014 ರಲ್ಲಿ ಪ್ರಾರಂಭವಾಯಿತು ಎಂದು ಸಾರ್ವಜನಿಕರು ಹೇಳುತ್ತಾರೆ ಆದರೆ 2011ರಲ್ಲಿ ಪ್ರಾರಂಭವಾಗಿದೆ ಎಂದು ಕೆಲ ದಾಖಲೆಗಳು ಹೇಳುತ್ತವೆ ಅದೇನೇ ಇರಲಿ ನನ್ನ ಅಧಿಕಾರದ ಅವಧಿಯಲ್ಲಿ ಈ ಎಂ ಎಸ್ ಜಿ ಪಿ ಕಸ ವಿಲೇವಾರಿ ಘಟಕವನ್ನು ಮುಚ್ಚಿಸಿಯೇ ತೀರುತ್ತೇನೆ. BBMP ಕಸ ನನ್ನ ತಾಲ್ಲೂಕಿಗೆ ಬರಬಾರದು, ತಾಲ್ಲೂಕಿಗೆ ಕಸ ಬಾರದಂತೆ ತಡೆಯಲು ನಾನು ಯಾವ ಹಂತದ ಹೋರಾಟಕ್ಕದರೂ ಸಿದ್ದ. ನಾವು ಕಾವೇರಿ ನೀರು ಕೇಳಿದರೆ ಕೊಡದ ಸರ್ಕಾರ ಬಿಬಿಎಂಪಿ ವ್ಯಾಪ್ತಿಯ ಕಸವನ್ನು ನೀಡುತ್ತಿದೆ, ಕಾವೇರಿ ನೀರು ಅವರಿಗೆ ಕಸ ದೊಡ್ಡಬಳ್ಳಾಪುರಕ್ಕಾ ನಮಗೆ ಬಿಬಿಎಂಪಿ ಕಸ ಬೇಡ ಈಗಾಗಲೇ ನಮ್ಮಲ್ಲಿ (ರಾಜ್ಯದಲ್ಲಿ) ಸುಮಾರು 8 ಬಿಬಿಎಂಪಿ ಕಸ ವಿಲೇವಾರಿ ಘಟಕಗಳು ಇದ್ದು ನಮ್ಮ ದೊಡ್ಡಬಳ್ಳಾಪುರದಲ್ಲಿ ಇರುವ ಕಸ ವಿಲೇವಾರಿ ಘಟಕ ಖಾಸಗಿ ಒಡೆತನದಲ್ಲಿ ಇದೆ. ಇನ್ನುಳಿದ 7 ಕಸವಿಲೇವಾರಿ ಘಟಕಗಳು ಸರ್ಕಾರ ನೋಡಿಕೊಳ್ಳುತ್ತಿದೆ. ಖಾಸಗಿಯವರ ಉದ್ದಾರ ಆಗೋದಕ್ಕೆ ನಾವು ಕಸ ಹಾಕಿಸಿಕೊಳ್ಳಬೇಕಾ…? ಕೂಡಲೇ ಈ ಘಟಕಕ್ಕೆ ಬರುವ ಕಸ ನಿಲ್ಲಿಸಬೇಕು ಇಲ್ಲವೇ ಉಗ್ರ ಹೋರಾಟ ಖಂಡಿತಾ ಎಂದು ಎಚ್ಚರಿಸಿದರು.
ನಮ್ಮ ಮೇಲೆ ಅಷ್ಟು ಪ್ರೀತಿ ಇದ್ದರೆ ಈ ಬಾರಿಯೇ ತಾಲೂಕಿನ ಮಜರಾಹೊಸಹಳ್ಳಿ, ದೊಡ್ಡತುಮಕೂರು ವ್ಯಾಪ್ತಿಯ ಗ್ರಾಮಗಳಿಗೆ ಕಾವೇರಿ ನೀರು ಒದಗಿಸಲಿ ಎಂದರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರ ಗೈರು
ಇಂದು ನಡೆದ ಸಮಾಲೋಚನಾ ಸಭೆಯಲ್ಲಿ ತಾಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಜನಪ್ರತಿನಿಧಿಗಳು ಗೈರಾಗಿದ್ದು, ಈ ಕುರಿತು ಉತ್ತರಿಸಿದ ಶಾಸಕರು ಸಭೆಗೆ ಹಾಜರಾಗಿಲ್ಲ ಎಂದರೆ ಅವರ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದರ್ಥ, ಇದು ತಾಲೂಕಿನ ವಿಚಾರ ಯಾವುದೇ ಪಕ್ಷ ಬೇಧ ಮಾಡದೆ ಎಲ್ಲರೂ ಒಟ್ಟಾಗಿ ಪಕ್ಷತೀತವಾಗಿ ತಾಲೂಕಿನ ಉಳಿವಿಗಾಗಿ ಹೋರಾಟ ಮಾಡಬೇಕಿದೆ. ಅಲ್ಲದೆ ಯಾವುದೇ ಹೋರಾಟ ಮಾಡಿದರು ಸರ್ವ ಪಕ್ಷಗಳ ಮುಖಂಡರಿಗೆ ಆಹ್ವಾನ ಕಳಿಸಲಾಗುವುದು ಇದು ನಮ್ಮ ತಾಲೂಕಿನ ವಿಷಯ ಎಲ್ಲಾ ಪಕ್ಷಗಳ ನಾಯಕರು ಮುಖಂಡರು ಹಾಗೂ ಜನಪ್ರತಿನಿಧಿಗಳು ಸ್ವಯಂ ಪ್ರೇರಿತರಾಗಿ ಹೋರಾಟದಲ್ಲಿ ಪಾಲ್ಗೊಳ್ಳುವುದು ಉತ್ತಮ ಎಂದರು.
ವೈಯಕ್ತಿಕವಾಗಿ ವೃಷಭಾವತಿ ನೀರು ನಮ್ಮ ತಾಲೂಕಿಗೆ ಬೇಡ ಎಂಬುದು ನನ್ನ ವಾದ ಈ ಕುರಿತಂತೆ ತಾಲೂಕಿನ ಎಲ್ಲ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಂವಾದ ನಡೆಸಿದ್ದೇನೆ , ನಾನು ಸಾರ್ವಜನಿಕರ ಧ್ವನಿ, ವೃಷಭಾವತಿ ನೀರು ಬೇಕೋ ಬೇಡವೋ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತೆರಾವು ನೀಡಲು ತಿಳಿಸಿದ್ದೇನೆ. ಸಾರ್ವಜನಿಕರ ನಿರ್ಧಾರವೇ ನನ್ನ ಅಂತಿಮ ನಿರ್ಧಾರವಾಗುತ್ತದೆ .ತಾಲೂಕಿಗೆ ನೀರು ಹರಿಸಬೇಕು ಬೇಡವೋ ಎಂಬುದನ್ನು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರೇ ನಿರ್ಧರಿಸಲಿದ್ದಾರೆ. ಅವರ ತೀರ್ಮಾನವನ್ನು ಸರ್ಕಾರಕ್ಕೆ ತಿಳಿಸುತ್ತೇನೆ ಎಂದರು.