ದೊಡ್ಡಬಳ್ಳಾಪುರ : ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಹಾಗೂ ದೇವಾಲಯದ ಪ್ರಸಿದ್ದಿಯನ್ನು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸುವ ನಿಟ್ಟಿನಲ್ಲಿ ಶ್ರೀಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವನ್ನ ರಚನೆ ಮಾಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಪಿ.ದಿನೇಶ್ ತಿಳಿಸಿದರು.
ಈ ಕುರಿತು ಮಾತನಾಡಿದ ಅವರು ದೇವಾಲಯದ ಸಮಗ್ರ ಅಭಿವೃದ್ಧಿಗಾಗಿ ಆಕ್ಷನ್ ಪ್ಲ್ಯಾನ್ ಸಿದ್ದಪಡಿಸಿ ಹಂತ ಹಂತವಾಗಿ ಅನುಷ್ಟಾನಗೊಳಿಸಲು ಯೋಜನೆಗಳನ್ನು ರೂಪಿಸಿದ್ದು, ಮೊದಲನೆಯದಾಗಿ ಮಾಸ್ಟರ್ ಪ್ಲ್ಯಾನ್ ಸಿದ್ದಪಡಿಸಿ ದೇವಾಲಯದ ವ್ಯಾಪ್ತಿಯ 10 ಎಕರೆ 23 ಗುಂಟೆ ಮತ್ತು ಎಸ್.ನಾಗೇನಹಳ್ಳಿ ಗ್ರಾಮದ (ಪಾಲ್ ಪಾಲ್ ದಿನ್ನೆ ಕೆರೆ ಹತ್ತಿರ) ಇರುವ 23 ಎಕರೆ 18 ಗುಂಟೆ ಜಮೀನುಗಳಲ್ಲಿ ಕೈಗೊಳ್ಳಬೇಕಾದ ಅತ್ಯಾವಶ್ಯಕವಾದ ಮತ್ತು ಅತಿ ತುರ್ತಾಗಿ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಮಾಡಲಾಗಿದೆ.
ಇದನ್ನೂ ಓದಿ : – ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ನೂತನ ಕಾರ್ಯದರ್ಶಿಯಾಗಿ ಪಿ. ದಿನೇಶ್ ಅಧಿಕಾರ ಸ್ವೀಕಾರ https://www.vijayamitra.com/2025/06/12/as-the-new-secretary-of-sri-ghati-subrahmanya-swamy-development-authority-p-dinesh-takes-charge/
ನೂತನ ಅನ್ನದಾಸೋಹ ಭವನ, ಕ್ಯೂ ಕಾಂಪ್ಲೆಕ್ಷ್, ಪಾರ್ಕಿಂಗ್ ಮತ್ತು ಇನ್ನಿತರೇ ಸೌಲತ್ತುಗಳನ್ನು ಮೊದಲನೆಯ ಹಂತದಲ್ಲಿ ಮತ್ತು ಎರಡನೆಯ ಹಂತದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ದೇವಾಯದ ಸುತ್ತಲಿನ 400 ಮೀ. ಸುತ್ತಳತೆಯಲ್ಲಿನ ಸರ್ಕಾರಿ ಮತ್ತು ಖಾಸಗಿ ಜಮೀನಿಗಳನ್ನು ಪಡೆದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು, ಶ್ರೀ ಘಾಟಿ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಗಲೀಕರಣ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.
ಪ್ರಾಧಿಕಾರದ ಬಗ್ಗೆ….ಒಂದಿಷ್ಟು ಮಾಹಿತಿ…
ಶ್ರೀಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಮುಜರಾಯಿ ಸಚಿವರಾದ ರಾಮಲಿಂಗರೆಡ್ಡಿಯವರು ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್.ಮುನಿಯಪ್ಪ ಉಪಾಧ್ಯಕ್ಷರು, ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಸದಸ್ಯರಾಗಿದ್ದು, 05 ಜನ ನಾಮ ನಿರ್ದೇಶಿತ ಸದಸ್ಯರು ಪ್ರಾಧಿಕಾರದಲ್ಲಿರುತ್ತಾರೆ.

ಇತ್ತೀಚೆಗೆ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಮತ್ತು ಆದಾಯ ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿದ ಅವರು, ದೇವಾಲಯಕ್ಕೆ ಬರುವ ಆದಾಯವನ್ನು ಅದೇ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು, ಅದಕ್ಕಾಗಿ ವಾರ್ಷಿಕ ಆಯ-ವ್ಯಯವನ್ನು ತಯಾರಿಸಿ ಸಿಬ್ಬಂದಿ ವೇತನ, ದೇವಾಲಯದಲ್ಲಿ ನಡೆಯುವ ಸೇವೆಗಳು, ಅನ್ನದಾಸೋಹ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು.
ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಖ್ಯ ವಾಸ್ತುಶಿಲ್ಪಿಗಳಿಂದ ಪ್ಲ್ಯಾನ್ ಮಾಡಿಸಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಅಂದಾಜುಪಟ್ಟಿ ಮಾಡಿಸಿ ಮಾನ್ಯ ಪ್ರಾಧಿಕಾರದ ಅನುಮೋದನೆ ಪಡೆದು ಅನುಷ್ಟಾನಗೊಳಿಸಲಾಗುವುದು. ಘಾಟಿ ಕ್ಷೇತ್ರಕ್ಕೆ ಸಾಮಾನ್ಯ ದಿನಗಳಂದು ಸುಮಾರು 2000 ಜನ, ಭಾನುವಾರ ಮತ್ತು ಮಂಗಳವಾರಗಳಂದು 12 ರಿಂದ 15 ಸಾವಿರ ಜನರು ಆಗಮಿಸುತ್ತಿರುತ್ತಾರೆ. ಭಕ್ತದಿಗಳಿಗೆ ಸಕಲ ಸೌಲಭ್ಯ ಒದಗಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.
ಸಂಪೂರ್ಣ ಪ್ಲಾಸ್ಟಿಕ್ ಬ್ಯಾನ್ ಗೆ ಘಾಟಿ ಸುಬ್ರಮಣ್ಯ ಸಜ್ಜು
ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಆಗಸ್ಟ್ 15ರೊಳಗೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸಚಿವರು ಸೂಚಿಸಿರುತ್ತಾರೆ. ಇದಕ್ಕಾಗಿ ಮೊದಲನೆಯ ಹಂತದಲ್ಲಿ ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿಯವರ ಸಹಯೋಗದೊಂದಿಗೆ ಸ್ಥಳೀಯವಾಗಿ ಅಂಗಡಿ ಮಳಿಗೆಗಳಲ್ಲಿ ಬಳಸಲಾಗುತ್ತಿರುವ ಪ್ಲಾಸ್ಟಿಕ್ ನಿಯಂತ್ರಿಸುವ ಬಗ್ಗೆ, ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆ ಮಾಡಿದವರ ಮಾರಾಟ ಪರವಾನಿಗಿ ರದ್ದು ಮಾಡಲು ಕ್ರಮ ಕೈಗೊಳ್ಳಲಾವುದು, ದೇವಾಲಯದ ಪ್ರತಿ ಗೇಟ್ ಗಳಲ್ಲೂ ಪ್ರತಿ ಭಕ್ತಾದಿಯನ್ನು ತಪಾಸಣೆ ಮಾಡುವ ಮೂಲಕ ಪ್ಲಾಸ್ಟಿಕ್ ನಿರ್ಬಂಧಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಅಲ್ಲದೇ ದೇವಾಲಯಕ್ಕೆ ಬರುವ ಭಕ್ತಾದಿಗಳು ಸ್ವಯಂ ಪ್ರೇರಿತರಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವ ಮೂಲಕ ದೇವಾಲಯದ ವಾತಾವರಣ ಸ್ವಚ್ಛವಾಗಿಡಲು ಸಹಕರಿಸಬೇಕಾಗಿ ಮನವಿ ಮಾಡಿದರು .
