ಈಗಾಗಲೇ ಹತ್ತಾರು ಬಾರಿ ಹತ್ತಾರು ಮನವಿಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದರು ಈವರೆಗೂ ಆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಯಾವ ರೀತಿಯ ಕ್ರಮ ಕೈಗೊಂಡಿದ್ದಾರೆ, ಅದರ ವಾಸ್ತವಿಕ ಪರಿಸ್ಥಿತಿ ಏನು ಎಂಬುದರ ಬಗ್ಗೆ ಮಾಹಿತಿಯನ್ನು ಅರ್ಜಿದಾರರಾದ ನಮಗೆ ನೀಡಿಲ್ಲ ಇಂದು ಅಧಿಕಾರಿಗಳಿಂದ ನಾವು ನೀಡಿದ್ದ ಮನವಿ ಸಂಬಂಧಿತ ಮಾಹಿತಿಯನ್ನು ಪಡೆಯಲು ಬಂದಿದ್ದೇವೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ KRS ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ. ಶಿವಶಂಕರ್ ತಿಳಿಸಿದರು.

ಬುಧವಾರ ತಾಲ್ಲೂಕು ದಂಡಾಧಿಕಾರಿಗಳ ಕಚೇರಿಗೆ ಭೇಟಿಕೋಟ್ಟು ಮಾತನಾಡಿದ ಅವರು ಹಲವಾರು ಬಾರಿ ತಾಲೂಕಿನ ಹಲವಾರು ಸಮಸ್ಯೆಗಳಿಗೆ ಕುರಿತಂತೆ ನಮ್ಮ ಪಕ್ಷದ ವತಿಯಿಂದ ಮನವಿ ಸಲ್ಲಿಸಿದ್ದೇವೆ ಆದರೆ ಈವರೆಗೂ ನಾವು ನೀಡಿರುವ ಮನವಿಗಳಿಗೆ ಅಧಿಕಾರಿಗಳು ಕೈಗೊಂಡಿರುವ ಕ್ರಮ, ಸಮಸ್ಯೆ ಪರಿಹಾರ ಕುರಿತಂತೆ ಯಾವುದೇ ರೀತಿಯ ಮಾಹಿತಿಯನ್ನು ಕೊಟ್ಟಿಲ್ಲ , ನಾವು ಸದಾಕಾಲ ಕೇವಲ ಮನವಿಯನ್ನು ಕೊಡುತ್ತಾ ಹೋದರೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವುದು ಯಾವಾಗ, ಸೂಕ್ತ ಕ್ರಮ ಕೈಗೊಂಡಿದ್ದಲ್ಲಿ ಮನವಿ ಸಲ್ಲಿಸಿದ್ದ ಅರ್ಜಿದಾರರಿಗೆ ತಿಳಿಸಬೇಕು ಅಲ್ಲವೇ ಎಂದರು.
ತಾಲೂಕಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಅನ್ಯಾಯದ ವಿರುದ್ಧ ನಮ್ಮ ಕೆಆರ್‌ಎಸ್ ಪಕ್ಷವು ನಿತ್ಯ ನಿರಂತರ ಹೋರಾಟಗಳು ಕೈಗೊಳ್ಳುವ ಮೂಲಕ ತಾಲೂಕಿನ ಅಧಿಕಾರಿಗಳ ಗಮನಕ್ಕೆ ತರುವುದಲ್ಲದೆ ಅಂತಹ ಪ್ರಕರಣಗಳ ವಿರುದ್ಧ ಅಧಿಕೃತವಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿಗಳನ್ನು ಸಹ ನೀಡುತ್ತೇವೆ ಆದರೆ ಈವರೆಗೂ ಕ್ರಮ ಕೈಗೊಂಡಿರುವ ಬಗ್ಗೆ ನಮಗೆ ಯಾವುದೇ ರೀತಿಯ ಹಿಂಬರಹ ದೊರೆಯುತ್ತಿಲ್ಲ ಹಾಗಾಗಿ ಇಂದು ತಾಲೂಕು ಕಚೇರಿಗೆ ಭೇಟಿ ನೀಡಿದ್ದು ಅಧಿಕಾರಿಗಳು ಸೂಕ್ತ ಮಾಹಿತಿ ಕೊಡುವವರೆಗೂ ನಾವು ಕಚೇರಿಯಿಂದ ಹೋಗಲ್ಲ ಎಂದರು .

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಬಿ ಶಿವಶಂಕರ್ , ಜಿಲ್ಲಾ ಸಮಿತಿಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಮಾರುತಿ,ಜಿಲ್ಲಾ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಬಿ ಎಲ್ ರಾಮ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಂಜಿತಾ, ಅಲೀಮ್,ಶ್ರೀನಿವಾಸ್, ವೆಂಕಟೇಶ್, ಫಾರೂಕ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.
