
ಹೆಗ್ಗಡಿಹಳ್ಳಿ : ಕೋರ್ಟ್ ನಿಂದ ದಲಿತರ ಪರ ಆದೇಶವಾಗಿದ್ದರೂ ಜಮೀನು ಮಾಲೀಕರಿಗೆ ಪಕ್ಕದ ಜಮೀನಿನ ಮಾಲೀಕರಿಂದ ದೌರ್ಜನ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಭಾರತೀಯ ಶೂದ್ರ ಸೇನೆ ವತಿಯಿಂದ ಸಂಕೇತಿಕ ಪ್ರತಿಭಟನಾ ಧರಣಿ ಮಾಡಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿ ಹೆಗ್ಗಡಿಹಳ್ಳಿ ಗ್ರಾಮದ ಸ.ನಂ.100/1 ರಲ್ಲಿ 0.02.08 ಗುಂಟೆ ಜಮೀನು ಓ.ಎಂ.ನಾರಾಯಣಸ್ವಾಮಿ, ಬಾಬು, ನಾಗರಾಜು ಎಂಬುವರಿಗೆ ಸೇರಿದ್ದು ಎಂಬ ಆದೇಶವಾಗಿದ್ದರು, ಜಮೀನ ಮಾಲೀಕರು ದಲಿತರು ಎಂಬ ಕಾರಣಕ್ಕೆ ಪಕ್ಕದ ಜಮೀನಿನ ಮಾಲೀಕರು ಹಾಗೂ ಸ್ಥಳೀಯರಾದ ಕೆಲವರು ನಾರಾಯಣಸ್ವಾಮಿಯವರನ್ನು ಜಮೀನಿಗೆ ಬಾರದಂತೆ ಕಾಂಪೌಂಡ್ ನಿರ್ಮಾಣ ಮಾಡಿದಂತೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಭಾರತೀಯ ಶೂದ್ರ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ ಹೆಗ್ಗಡಿಹಳ್ಳಿ ಗ್ರಾಮದ ಸ.ನಂ.100/1 ಜಾಗವುಓ.ಎಂ.ನಾರಾಯಣಸ್ವಾಮಿ, ಬಾಬು, ನಾಗರಾಜುರವರಿಗೆ ಸೇರಿದ್ದು ಅವರೇ ವಾರಸುದಾರರೆಂದು ನ್ಯಾಯಾಲಯದ ಆದೇಶ ನೀಡಿದ್ದರು, ಇಲ್ಲಿ ಕೆಲವರು ದೌರ್ಜನ್ಯ ತೊಂದರೆ ಕೊಡುತ್ತಿದ್ದಾರೆ ನಮಗೆ ನ್ಯಾಯ ಬೇಕೆಂದು ಸಹಾಯಕೋರಿ ನಮ್ಮ ಭಾರತೀಯ ಶೂದ್ರ ಸೇನೆಗೆ ಅಹವಾಲು ಬಂದಿದ್ದು ಈ ವಿಚಾರವಾಗಿ ಕಳೆದ ನಾಲ್ಕು ಬಾರಿ ಸ್ಥಳಕ್ಕೆ ಭೇಟಿ ನೀಡಿದ್ದೆವು ಆದರೆ ಸ್ಥಳೀಯ ಕೆಲವರ ದೌರ್ಜನ್ಯಕ್ಕೆ ಮಿತಿ ಇಲ್ಲದಂತಾಗಿದೆ ನ್ಯಾಯಾಲಯದ ಆದೇಶಕ್ಕೂ ಧಿಕ್ಕರಿಸಿ ದಲಿತರ ಮೇಲೆ ದೌರ್ಜನಕ್ಕೆ ಮುಂದಾಗುತ್ತಿದ್ದಾರೆ, ನ್ಯಾಯಾಲಯಕ್ಕೆ ಬೆಲೆಕೊಟ್ಟು ಈ ದೌರ್ಜನವನ್ನು ಇಲ್ಲಿಗೆ ನಿಲ್ಲಿಸದಿದ್ದರೆ ಮುಂದೆ ನಮ್ಮ ಭಾರತೀಯ ಶೂದ್ರ ಸೇನೆ ವತಿಯಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಹಣಿದಾರರಾದ ಓ.ಎಂ.ನಾರಾಯಣಸ್ವಾಮಿ ಯವರ ಪುತ್ರ ರಂಜಿತ್ ಬಾಬು ಮಾತನಾಡಿ ನಮಗೆ ವಿನಃಕಾರಣ ತೊಂದರೆ ಕೊಡುತ್ತಿದ್ದಾರೆ ನಾವು ಕೇವಲ ದಲಿತರು ಎಂಬ ಕಾರಣಕ್ಕೆ ಈ ರೀತಿ ದೌರ್ಜನ್ಯಕ್ಕೆ ಮುಂದಾಗಿದ್ದಾರೆ ದೌರ್ಜನ್ಯ ಮತ್ತು ದಬ್ಬಾಳಿಕೆ ವಿರುದ್ಧ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ನ್ಯಾಯಾಲಯದ ಆದೇಶದಂತೆ ನಾವು ನಮ್ಮ ಸ್ಥಳಕ್ಕೆ ಬಂದಿದ್ದೇವೆ ಆದರೆ ಇಲ್ಲಿ ಕಂಪೌಂಡ್ ನಿರ್ಮಿಸಲು ವಿನಾಕಾರಣ ತೊಂದರೆ ಕೊಡುತ್ತಿದ್ದು ಕಂಪೌಂಡ್ ಬಿಳಿಸುವ ಬೆದರಿಕೆ ಕೂಡ ಹಾಕಲಾಗುತ್ತಿದೆ ಎಂದರು.
ಜಮೀನಿನ ಸಹ ಮಾಲೀಕರಾದ ನಾಗರಾಜ್, ನರೇಂದ್ರಬಾಬು ಮಾತನಾಡಿ ಈಗಾಗಲೇ ಹಲವು ಬಾರಿ ಸ್ಥಳಕ್ಕೆ ಭೇಟಿ ನೀಡಿ ನಮ್ಮ ಸ್ಥಳ ನಮಗೆ ಬಿಟ್ಟು ಕೊಡಿ ಎಂದು ಮನವಿ ಮಾಡಿಕೊಂಡಿದ್ದೇವೆ ಆದರೆ ನಾವು ದಲಿತರು ಎಂಬ ಕಾರಣಕ್ಕೆ ನಮಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ನಮಗೆ ಯಾರ ಆಸ್ತಿಯು ಬೇಡ , ಕೋರ್ಟ್ ಆದೇಶದಂತೆ ನಮಗೆ ಬಂದಿರುವ ಜಾಗ ನಮಗೆ ಬಿಟ್ಟುಕೊಟ್ಟರೆ ಸಾಕು, ಇಂದು ಕಾಂಪೌಂಡ್ ನಿರ್ಮಾಣ ಮಾಡಿದ್ದೇವೆ, ಈ ರೀತಿಯ ದಬ್ಬಾಳಿಕೆ ನಾವು ಸಹಿಸೋಲ್ಲ ಎಂದರು.