
ನವ ಕರ್ನಾಟಕ ಯುವ ಶಕ್ತಿ ವೇದಿಕೆ ವತಿಯಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಕೆ. ಸುಧಾಕರ್ ಅವರಿಗೆ, ಒಡ್ಡರಹಳ್ಳಿ (ORH) ರೈಲು ನಿಲ್ದಾಣವನ್ನು “ಘಾಟಿ ಸುಬ್ರಮಣ್ಯ ರಸ್ತೆ ರೈಲು ನಿಲ್ದಾಣ” ಎಂದು ಮರುಹೆಸರಿಸುವಂತೆ ಹಾಗೂ ಭಕ್ತರ ಅನುಕೂಲಕ್ಕಾಗಿ ಇಲ್ಲಿ ಕೆಲವು ಪ್ರಮುಖ ರೈಲುಗಳಿಗೆ ನಿಲುಗಡೆ ಕಲ್ಪಿಸಲು ನಿರ್ದಿಷ್ಟ ಮನವಿ ಪತ್ರ ಸಲ್ಲಿಸಲಾಗಿದೆ.
ತುಬಗೆರೆ ಸಮೀಪದ ಘಾಟಿ ಸುಬ್ರಮಣ್ಯ ದೇವಾಲಯವು ರಾಜ್ಯದ ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಒಂದು. ಬೆಂಗಳೂರಿನಿಂದ ಕೇವಲ 60 ಕಿಲೋಮೀಟರ್ ದೂರದಲ್ಲಿರುವ ಈ ಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಇಂತಹ ಪ್ರಸಿದ್ಧ ಕ್ಷೇತ್ರದ ಹತ್ತಿರವೇ ಇದ್ದರೂ, “ಒಡ್ಡರಹಳ್ಳಿ” ಎಂಬ ಹೆಸರಿನ ಕಾರಣದಿಂದ ರೈಲು ಪ್ರಯಾಣಿಕರಲ್ಲಿ ಇದರ ಅರಿವು ಕಡಿಮೆ ಇದ್ದು, ಹೆಚ್ಚಿನ ಭಕ್ತರು ರಸ್ತೆ ಮಾರ್ಗವನ್ನೇ ಆಯ್ಕೆ ಮಾಡುತ್ತಿದ್ದಾರೆ.
ಮನವಿ ಪತ್ರದ ಮುಖ್ಯಾಂಶಗಳು ಹೀಗಿವೆ:
ಒಡ್ಡರಹಳ್ಳಿ (ORH) ನಿಲ್ದಾಣವನ್ನು “ಘಾಟಿ ಸುಬ್ರಮಣ್ಯ ರಸ್ತೆ” ಎಂದು ಮರುಹೆಸರಿಸುವಂತೆ ಆಗ್ರಹ.ನಿಲ್ದಾಣದ ಮೂಲಕ ಹಾದುಹೋಗುವ ಪ್ರಮುಖ ಎಕ್ಸ್ಪ್ರೆಸ್ ಹಾಗೂ ಪ್ಯಾಸೆಂಜರ್ ರೈಲುಗಳಿಗೆ ವಿಶೇಷ ನಿಲ್ದಾಣ ವ್ಯವಸ್ಥೆ ಕಲ್ಪಿಸುವಂತೆ ವಿನಂತಿ.
ರಸ್ತೆ ಸಾರಿಗೆ ಸಾಕಷ್ಟು ಅಸಮರ್ಪಕವಾಗಿದ್ದು, ವಿಶೇಷ ದಿನಗಳಲ್ಲಿ ಭಾರೀ ಸಂಚಾರ ಜಾಮಾಗಳಾಗುತ್ತಿರುವುದು.
ಈ ಹೆಸರಿನ ಬದಲಾವಣೆ ಮತ್ತು ನಿಲ್ದಾಣ ಸೌಲಭ್ಯ ಹೆಚ್ಚಿದರೆ, ಭಕ್ತರಿಗೆ ಅನುಕೂಲವಾಗುವುದು ಮಾತ್ರವಲ್ಲ, ಸ್ಥಳೀಯ ಆರ್ಥಿಕತೆಗೂ ಉತ್ತೇಜನ ದೊರಕುವುದು.
ಈ ಕುರಿತು ಮಾನ್ಯ ಸಂಸದರು ರೈಲ್ವೆ ಇಲಾಖೆಗೆ ಶಿಫಾರಸು ಮಾಡಿದರೆ, ಈ ಜನಪರ ಬೇಡಿಕೆ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಬಹಳ ಹೆಚ್ಚು, ಎಂದು ವೇದಿಕೆ ಕಾರ್ಯದರ್ಶಿ ಉದಯ ಆರಾಧ್ಯ ಮತ್ತು ಅಧ್ಯಕ್ಷ ಹಳ್ಳಿ ರೈತ ಅಂಬರೀಶ್ ತಿಳಿಸಿದರು.