
ದೊಡ್ಡಬಳ್ಳಾಪುರ: ಈ ಬಾರಿಯ ಸ್ವರ್ಣಗೌರಿ ವ್ರತ ಮತ್ತು ಗಣೇಶ ಚತುರ್ಥಿಯನ್ನು ಪರಿಸರಸ್ನೇಹಿಯಾಗಿ ಆಚರಿಸುವ ಅಭಿಯಾನಕ್ಕೆ ಇಲ್ಲಿನ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್ಟಿಟ್ಯೂಷನ್ಸ್ನ ನೇತೃತ್ವದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ಅಭಿಯಾನದ ಭಾಗವಾಗಿ ಜೇಡಿಮಣ್ಣಿನಿಂದ ತಯಾರಿಸಿದ ಬಣ್ಣರಹಿತ 108 ಗೌರಿ ಹಾಗೂ 108 ಗಣೇಶ ವಿಗ್ರಹಗಳನ್ನು ವಿಜಯಲಕ್ಷ್ಮಿ ಎಂಟರ್ ಪ್ರೈಸಸ್ ಸಹಯೋಗದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಲಯನ್ಸ್ ಜಿಎಂಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್, ಧಾರ್ಮಿಕ ಆಚರಣೆಗಳು ಪರಿಸರಸ್ನೇಹಿಯಾಗಿದ್ದಾಗ ಹೆಚ್ಚಿ ಅರ್ಥಪೂರ್ಣವಾಗುತ್ತವೆ. ಈ ನಿಟ್ಟಿನಲ್ಲಿ ಕಳೆದ 8 ವರ್ಷಗಳಿಂದ ಬಣ್ಣರಹಿತ ಮಣ್ಣಿನ ಗೌರಿ-ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸುವ ಅಭಿಯಾನವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಆರ್.ರವಿಕಿರಣ್ ಮಾತನಾಡಿ, ಲಯನ್ಸ್ ಕ್ಲಬ್ ಪರಿಸರಸ್ನೇಹಿ ಚಿಂತನೆಗಳನ್ನು ಬಿತ್ತುವ ಮಹತ್ವದ ಕೆಲಸವನ್ನು ಮಾಡುತ್ತಿದೆ. ರಾಸಾಯನಿಕಯುಕ್ತ ಬಣ್ಣಗಳಿಂದ ಜಲಮೂಲಗಳಿಗೆ ಹಾನಿಯಾಗುತ್ತದೆ. ಅಲ್ಲದೆ ಪಿಒಪಿ ವಿಗ್ರಹಗಳು ನೀರಿನಲ್ಲಿ ಕರಗುವುದಿಲ್ಲ. ಹಬ್ಬವನ್ನು ಪರಿಸರಕ್ಕೆ ಪೂರಕವಾಗಿ ಆಚರಿಸುವುದು ಎಲ್ಲರ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಿ ಜನರಿಗೆ ಗೌರಿ ಹಾಗೂ ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದರು.
ಲಯನ್ಸ್ ವಲಯ ಅಧ್ಯಕ್ಷ ಜೆ.ಆರ್.ರಾಕೇಶ್, ಕ್ಲಬ್ ಕಾರ್ಯದರ್ಶಿ ಎ.ಎಸ್.ಸುಮಾ, ಖಜಾಂಚಿ ಕೆ.ಸಿ.ನಾಗರಾಜ್, ಸಹಕಾರ್ಯದರ್ಶಿ ಮುಕೇಶ್ ಎನ್.ಆರ್, ನಿರ್ದೇಶಕರಾದ ಕೆ.ವಿ.ಪ್ರಸನ್ನಕುಮಾರ್, ಕೆ.ಆರ್.ಮಂಜುಳಾ, ಮಂಜುನಾಥ್, ಕಾವ್ಯ, ಆರ್ಯಭಟ ಲಯನ್ಸ್ ಸಂಸ್ಥೆ ಅಧ್ಯಕ್ಷ ಮನೋಹರ್, ಮನಸ್ವಿ, ಮೇಧ, ಚಾರ್ವಿ, ಪೃಷಿತ, ಅಕ್ಷಯ್ ಸೇರಿದಂತೆ ಅಕ್ಷಯ ಲಿಯೋ ಕ್ಲಬ್, ಏಕಲವ್ಯ ಲಿಯೋ ಕ್ಲಬ್, ಆರ್ಯಭಟ ಲಿಯೋ ಲಯನ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
Ad
Ad
Ad