ದೇಶ ಪ್ರಗತಿಯಾಗಬೇಕಾದರೆ ಶಿಕ್ಷಣದ ಪಾತ್ರ ಮಹತ್ವದ್ದಾಗಿದ್ದು ಇಂತಹ ಶೀಕ್ಷಣವನ್ನು ನೀಡುವ ಶಿಕ್ಷಕರು ದೇಶದ ಅಭಿವೃದ್ದಿಯ ಚಿಂತನೆ ಹೊಂದುವುದರೊ0ದಿಗೆ ಮಕ್ಕಳನ್ನು ಸಂಸ್ಕಾರವoತರನ್ನಾಗಿ ರೂಪಿಸಬೇಕಿದೆ ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರ ಜನ್ಮ ದಿನಾಚರಣೆ ಹಾಗೂ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ಅಮೇರಿಕಾದಂತಹ ದೇಶಗಳು ಮುಂದುವರೆದಿವೆ ಎಂದರೆ ಅಲ್ಲಿನ ಶಿಕ್ಷಣ ಬಹು ಮುಖ್ಯ ಪಾತ್ರ ವಹಿಸುತ್ತದೆ. ನಮ್ಮ ರಾಜ್ಯದಲ್ಲಿ ಶಿಕ್ಷಣಕ್ಕಾಗಿ ಹತ್ತನೇ ಒಂದು ಭಾಗ ಮೀಸಲಿಡಲಾಗುತ್ತಿದ್ದು, ಶಿಕ್ಷಣಕ್ಕೆ ಇನ್ನು ಹೆಚ್ಚಿನ ಅನುದಾನ ನೀಡಬೇಕಿದೆ ಎಂದರು.
ಅಮೇರಿಕಾ ಜನಸಂಖ್ಯೆಯ ಒಂದೂವರೆ ಪಟ್ಟು ನಮ್ಮ ದೇಶದಲ್ಲಿ ಮೊಬೈಲ್ ಹಾಗೂ ಇಂಟರ್ನೆಟ್ ಬಳಸುತ್ತಿದ್ದಾರೆ. ದೇಶಕ್ಕೆ ಸೈನಿಕರು ಬೇಕು ಆದರೆ ಕುಟುಂಬದಲ್ಲಿ ಒಬ್ಬ ಸೈನಿಕರನ್ನು ಕಳಿಸಲು ಬಹಳಷ್ಟು ಜನ ಮುಂದೆ ಬರುವುದಿಲ್ಲ. ಇಂದು ಸಮಾಜದಲ್ಲಿ ಸ್ವಾರ್ಥಕ್ಕಾಗಿ ದುಡಿಯುವ ಸಂಖ್ಯೆ ಹೆಚ್ಚಾಗಿದೆ. ಭ್ರಷ್ಟಾಚಾರ ಸಮಾಜದ ಕೆಡಕುಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಕಾನೂನಿನ ಬಗ್ಗೆ ಇಂದಿನ ಮಕ್ಕಳಿಗೆ ತಿಳಿಸಬೇಕಿದೆ. ಸಮಾಜಮುಖಿ ಚಿಂತನೆ ದೇಶಪ್ರೇಮಕ್ಕೆ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮಾದರಿಯಾಗಿದ್ದು ಅವರ ಆದರ್ಶಗಳು ಪ್ರೇರಣೆಯಾಗಬೇಕು. ಮಕ್ಕಳನ್ನು ಪ್ರಜ್ಞಾವಂತರನ್ನಾಗಿಸುವಲ್ಲಿ ಶಿಕ್ಷಕರ ಮಾತ್ರ ಮಹತ್ವದ್ದಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಪೂರಕವಾಗಿ ಆ್ಯಪ್ ಸಿದ್ದ
ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡಲಾಗುವುದು. ೧೦ ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಪೂರಕವಾಗಿ ಆ್ಯಪ್ ತಯಾರು ಮಾಡಲಾಗಿದ್ದು, ಇದರ ಸದುಪಯೋಗ ಪಡೆಯಬೇಕಿದೆ. ಮುಂದೆ ನವೆಂಬರ್ ೧೪ರಂದು ಮಕ್ಕಳ ದಿನಾಚರಣೆಯನ್ನು ನಗರದ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ಮಾಡಲು ಚಿಂತನೆ ನಡೆಸಿದ್ದು, ಶಿಕ್ಷಕರು ಈ ಕಾರ್ಯಕ್ರಮದ ನೇತೃತ್ವ ವಹಿಸಬೇಕು ಎಂದರು.

ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಹನುಮಂತರಾಯಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕಟ್ಟಡ, ಶಿಕ್ಷಕರ ಕೊರತೆ ಮೊದಲಾದ ಸಮಸ್ಯೆಗಳಿದ್ದರೂ ಶಿಕ್ಷಕರು ತಮ್ಮ ಕಾರ್ಯವನ್ನು ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿರುವ ಮಕ್ಕಳು ಮುಂದೆ ಐಎಎಸ್, ಕೆಎಎಸ್ ಸೇರಿದಂತೆ ಉನ್ನತ ಅಕಾರಿಗಳಾಗಿ ರೂಪುಗೊಂಡಿದ್ದಾರೆ. ಶಿಕ್ಷಕರ ವೃತ್ತಿ ಸಮಾಜದಲ್ಲಿ ಶ್ರೇಷ್ಟ ವೃತ್ತಿಯಾಗಿದ್ದು, ಇದರ ಘನತೆಯನ್ನು ಶಿಕ್ಷಕರು ಎತ್ತಿ ಹಿಡಿಯಬೇಕಿದೆ ಎಂದರು.
ಸಮಾರಂಭದಲ್ಲಿ ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್, ನಗರಸಭೆ ಉಪಾಧ್ಯಕ್ಷ ಎಂ.ಮಲ್ಲೇಶ್, ಭಾರತ ಸೇವಾ ದಳದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಲಕ್ಷ್ಮೀಪತಿ ,ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ. ಎಂ.ಹನುಮಂತರಾಯಪ್ಪ, ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ (ಆಡಳಿತ) ಪಿ.ಬೈಲಾಂಜಿನಪ್ಪ, ಕ್ಷೇತ್ರ ಶಿಕ್ಷಣಾಕಾರಿ ಶಂಕರಯ್ಯ, ಟಿ.ಎಸ್, ಸಮನ್ವಯಾಕಾರಿ ಜಿ.ಆರ್.ಹನುಮಂತರಾಯಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್.ರಾಜಶೇಖರ್, ಪ್ರಧಾನ ಕಾರ್ಯದರ್ಶಿ ದನಂಜಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ವಾಸದೇವಮೂರ್ತಿ, ತಾಲೂಕು ಅಧ್ಯಕ್ಷ ಬಸವಲಿಂಗಯ್ಯ, ಕರ್ಯದರ್ಶಿ ಎ.ವಿ.ಚಂದ್ರಪ್ಪ, ಪ್ರಾಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ್.ಆರ್, ಕರ್ಯದರ್ಶಿ ಸಿದ್ದಲಿಂಗಸ್ವಾಮಿ, ನಿವೃತ್ತ ಅಧಿಕಾರಿ ಪದ್ಮರಾಜ್ ಸೇರಿದಂತೆ ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳು, ತಾಲೂಕಿನ ಶಿಕ್ಷಕರು ಭಾಗವಹಿಸಿದ್ದರು.
