ದೊಡ್ಡಬಳ್ಳಾಪುರ : ಕೊರೊನಾ ಸಮಯದಲ್ಲಿ ಹಸಿದ ಹೊಟ್ಟೆಗಳನ್ನು ತುಂಬಿಸುವ ಆಶಯದಿಂದ ಮಲ್ಲೇಶ್ ನೇತೃತ್ವದಲ್ಲಿ ಪ್ರಾರಂಭವಾದ ನಿರಂತರ ಅನ್ನದಾಸೋಹ ಕಾರ್ಯಕ್ರಮವು ಇಂದಿಗೆ 2,000 ದಿನಗಳನ್ನು ಪೂರೈಸಿ ಮುಂದೆ ಸಾಗುತ್ತಿದೆ ಎಂದು ಖ್ಯಾತ ವಕೀಲ ಹಾಗೂ ಸಮಾಜ ಸೇವಕ ರವಿ ಮಾವಿನಕುಂಟೆ ತಿಳಿಸಿದರು.

ನಗರದ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿರಂತರ ಅನ್ನದಾಸೋಹ ಸಮಿತಿ ವತಿಯಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಕೇವಲ ಒಂದೆರಡು ದಿನ ಆಹಾರ ವಿತರಣೆ ಮಾಡುವುದೇ ಕಷ್ಟಕರವಾಗಿದೆ ಇಂತಹ ಸಂದರ್ಭದಲ್ಲಿ ಮಲ್ಲೇಶ್ ಮತ್ತು ತಂಡ ದಾನಿಗಳ ನರವಿನಿಂದ ಕಳೆದ 2008 ದಿನಗಳಿಂದಲೂ ನಿರಂತರ ಕಡು ಬಡವರಿಗೆ ನಿರಾಶ್ರಿತರಿಗೆ ಆಹಾರ ಒದಗಿಸುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಷ್ಟೇ ಯೋಜನೆಗಳನ್ನು ರೂಪಿಸಿದರು ಬಡತನ ನಿರ್ಮೂಲನೆ ಮಾಡಲು ಸಾಧ್ಯವಾಗಲಿಲ್ಲ ನಮ್ಮ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳುವ ರಾಜ್ಯ ಹಾಗೂ ಕೇಂದ್ರ ರಾಜಕಾರಣಿಗಳು ಒಮ್ಮೆ ಬಂದು ಬಡವರ ಕಾಲೋನಿಗಳಲ್ಲಿ ವಾಸ್ತವಂಶ ಪರಿಶೀಲಿಸಲಿ ಬಡತನ ರೇಖೆಗಿಂತ ಕೆಳಗೆ ಜೀವನ ನಡೆಸುವ ಎಷ್ಟೋ ಕುಟುಂಬಗಳು ದಿನ ಹಸಿವಿನಿಂದ ಸಾಯುತ್ತಿವೆ ಅಂತಹ ಕುಟುಂಬಗಳಿಗೆ ನಿರಂತರ ಅನ್ನದಾಸೋಹಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಮಾತನಾಡಿ ಪ್ರತಿನಿತ್ಯ ಹಸಿದವರಿಗೆ ಆಹಾರ ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಈ ಕಾರ್ಯಕ್ರಮವು ಕೇವಲ ಆಹಾರ ವಿತರಣೆಗೆ ಸೀಮಿತವಾಗದೆ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ , ವೃದ್ಧರ ಆರೋಗ್ಯಕ್ಕೆ, ಕಡುಬಡ ಕುಟುಂಬಗಳ ದೈನಂದಿಕ ಬದುಕಿಗೆ ಸಾಕಷ್ಟು ಸಹಕಾರಿಯಾಗಿದೆ . ಈ ಉತ್ತಮ ಕಾರ್ಯ ಮತ್ತಷ್ಟು ಹೆಚ್ಚಾಗಿ ನಡೆಯಲಿ ಮಲ್ಲೇಶ್ ಮತ್ತು ದಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಸಮಾಜ ಸೇವಕರಾದ ಸೇಲ್ವಮ್ ಮಾತನಾಡಿ ಪ್ರತಿನಿತ್ಯ ದಾನಿಗಳ ವಿಶೇಷಗಳನ್ನು ನಿರಂತರ ಅನ್ನದಾಸೋಹ ಸಮಿತಿ ವೇದಿಕೆಯಲ್ಲಿ ಸಂಭ್ರಮಿಸಲಾಗುತ್ತದೆ. ದಾನಿಗಳ ಸಂಭ್ರಮ ನೂರಾರು ಜನರಿಗೆ ಆಹಾರ ಒದಗಿಸುತ್ತದೆ. ದುಂದು ವೆಚ್ಚ ಮಾಡಿ ಸಂಭ್ರಮಿಸುವ ಬದಲು ಅರ್ಥಪೂರ್ಣವಾಗಿ ನೂರಾರು ಮಕ್ಕಳಿಗೆ, ವಯೋವೃದ್ದರಿಗೆ , ಹಸಿದವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ತಮ್ಮ ವಿಶೇಷ ದಿನಗಳನ್ನು ಆಚರಿಸುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು

ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಕಾರ್ಯಕ್ರಮ ಪ್ರಾರಂಭಿಸಿದ ಸಂದರ್ಭದಲ್ಲಿ ಕೆಲವು ಮಂದಿ ಮಾತ್ರ ಬರುತ್ತಿದ್ದರು. ದಿನಕಳೆದಂತೆ ಇಲ್ಲಿಗೆ ಬರುವ ನಿರಾಶ್ರಿತ ಕಡುಬಡವರ ಸಂಖ್ಯೆ ಹೆಚ್ಚಾಗುತ್ತಿದೆ. ದಾನಿಗಳ ನೆರವಿನಿಂದ ಶಕ್ತಿ ಮೀರಿ ಕಾರ್ಯಕ್ರಮ ಕೈಗೊಳ್ಳುತ್ತಿದ್ದೇವೆ . ಈ ಕಾರ್ಯಕ್ರಮಕ್ಕೆ ದಾನಿಗಳ ಅವಶ್ಯಕತೆ ಇದೆ ಸಮಾಜದಲ್ಲಿ ಉಳ್ಳವರು ಸಾಕಷ್ಟು ಮಂದಿ ಇದ್ದಾರೆ ತಮ್ಮ ವಿಶೇಷ ದಿನಗಳನ್ನು ನಮ್ಮ ಸಮಿತಿಯೊಟ್ಟಿಗೆ ಆಚರಿಸುವ ಮೂಲಕ ಹಸಿದ ಹೊಟ್ಟೆ ಗಳಿಗೆ ಆಹಾರ ವಿತರಣೆ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ನಗರಸಭೆ ಉಪಾಧ್ಯಕ್ಷ ರೈಲ್ವೆ ಸ್ಟೇಷನ್ ಮಲ್ಲೇಶ್, ದರ್ಗಾ ಜೋಗಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಶಶಿಕಲಾ ನಾಗರಾಜು, ಕಸವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಅಪ್ಪಿ, ಪಿ ಸಿ ಲಕ್ಷ್ಮೀನಾರಾಯಣ, ಶಿವಕುಮಾರ್, ರಾಘವೇಂದ್ರ, ಶಕ್ತಿ ಜ್ಞಾನದೇವಿ ವೀರಭದ್ರ ಬಸಪ್ಪ ಕ್ಷೇತ್ರದ ಪ್ರಧಾನ ಅರ್ಚಕರಾದ ನವೀನ್ ಕುಮಾರ್, ದೊಡ್ಡಬಳ್ಳಾಪುರ ಕಲಾವಿದರ ಸಂಘದ ಅಧ್ಯಕ್ಷ ಎ ಸಿ ಅಶೋಕ್,ಬಿ ಜಿ ಅಮರ್ ನಾಥ್ , ಸೇಲ್ವಮ್, ಶ್ರೀನಿವಾಸ್ ಗುರೂಜಿ, ಶ್ರೀನಿವಾಸ್ ದೊಡ್ಡಬೆಳವಂಗಲ, ನಟ ವೀಡೆ ಸುಧೀರ್, ಸಮಾಜ ಸೇವಕಿ ಅಮೀನಾ ಕೊಡಗು, ದೈವ ಪುತ್ರ ಚಿತ್ರ ತಂಡದ ಎಲ್ಲಾ ಕಲಾವಿದರು ಹಾಜರಿದ್ದರು.
