
ಕನ್ನಡ ಓದುಗರ ಸಂಖ್ಯೆಯನ್ನು ಕಾದಂಬರಿಗಳ ಮೂಲಕ ಹೆಚ್ಚಿಸಿದವರು ಎಸ್.ಎಲ್.ಭೈರಪ್ಪ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಘಟನಾ ಕಾರ್ಯದರ್ಶಿ ರಾಜಘಟ್ಟ ರವಿ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ನಡೆದ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಎಸ್.ಎಲ್.ಭೈರಪ್ಪ ಅವರು ತಮ್ಮ ಪ್ರತಿಯೊಂದೂ ಕಾದಂಬರಿ ಬರೆಯುವುದಕ್ಕೆ ನಡೆಸುತ್ತಿದ್ದ ಪೂರ್ವ ತಯಾರಿ, ವ್ಯಾಪಕ ಅಧ್ಯಯನ, ಸಂಚಾರ ಗಮನಾರ್ಹವಾದುದು. ಸುದೀರ್ಘ ಕಾಲ ಭೈರಪ್ಪನವರ ಕಾದಂಬರಿಗಳು ಓದುಗರ ಮನಸ್ಸನ್ನು ಆಕರ್ಷಣೆಗೊಳಿಸಿವೆ. ಭೈರಪ್ಪ ಅವರ ಕಾದಂಬರಿಗಳು ಭಾರತದ ವಿವಿಧ ಭಾಷೆಗಳಿಗೆ ಅನುವಾದವಾಗಿವೆ. ವಂಶವೃಕ್ಷ, ಸಾಕ್ಷಿ ಮತ್ತು ಪರ್ವ ಕೃತಿಗಳು ಇಂಗ್ಲಿಷ್ಗೆ ಭಾಷಾಂತರಗೊಂಡಿವೆ ಎಂದರು.
ಜವಾಹರ ನವೋದಯ ವಿದ್ಯಾಲಯದ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ ಮಾತನಾಡಿ, ಸಾಹಿತಿಗಳಿಗೆ ಓದುಗರೇ ಪ್ರಶಸ್ತಿ ಮತ್ತು ಪುರಸ್ಕಾರಗಳು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆಗಳನ್ನು ಎಸ್.ಎಲ್.ಭೈರಪ್ಪ ಅವರು ತಮ್ಮ ಸಾಹಿತ್ಯದ ಮೂಲಕ ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಗೊಳಿದರು. ಬದುಕು ಮತ್ತು ಅನುಭವಗಳಿಗೆ ಸೃಜನಾತ್ಮಕವಾಗಿ ಅಭಿವ್ಯಕ್ತಪಡಿಸಲು ಕಾದಂಬರಿ ಪ್ರಕಾರವನ್ನು ಮಾಧ್ಯಮವಾಗಿಸಿಕೊಂಡರು. ಯಾವ ಸಾಹಿತ್ಯ ಪಂಥಗಳ ಗುಂಪಿಗೂ ಒಳಗಾಗದೆ ತಮ್ಮದೇ ವ್ಯಕ್ತಿತ್ವದ ಛಾಪು ಮೂಡಿಸಿದರು ಎಂದರು..
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ಮಾತನಾಡಿ, ಎಸ್.ಎಲ್.ಭೈರಪ್ಪ ಅವರ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೇ, ಮತದಾನ, ನಾಯಿನೆರಳು ಕಾದಂಬರಿಗಳು ಚಲನಚಿತ್ರಗಳಾಗಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳಿಗೆ ಪುರಸ್ಕೃತವಾಗಿವೆ. ಗೃಹಭಂಗ’ ದೂರದರ್ಶನದಲ್ಲಿ ಧಾರಾವಾಹಿಯಾಗಿ ಮೂಡಿಬಂದಿದೆ. ಅಪಾರ ಓದುಗ ಮತ್ತು ಅಭಿಮಾನ ಬಳಗವನ್ನು ಹೊಂದಿದ್ದ ಎಸ್.ಎಲ್.ಭೈರಪ್ಪ ಅವರು ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಕೋಶಾಧ್ಯಕ್ಷ ಜಿ.ಸುರೇಶ್ ಮಾತನಾಡಿ, ಎಸ್.ಎಲ್.ಭೈರಪ್ಪ ಅವರ ಸಾಹಿತ್ಯ ಸಾಧನೆಯನ್ನು ಪುರಸ್ಕರಿಸಿ ಪದ್ಮಶ್ರೀ ಪ್ರಶಸ್ತಿ, ‘ಸರಸ್ವತಿ ಸನ್ಮಾನ್ ಮುಂತಾದ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಎಸ್.ಎಲ್. ಭೈರಪ್ಪನವರು ಚಿಂತನಶೀಲತೆ ಮತ್ತು ಅನನ್ಯ ಅಧ್ಯಯನಶೀಲತೆ ಯುವ ಮತ್ತು ಉದಯೋನ್ಮುಖ ಬರಹಗಾರರಿಗೆ ಸದಾ ದಾರಿದೀಪವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಹಾಯಕ ಜಿಲ್ಲಾ ಆಯುಕ್ತ ವೆಂಕಟರಾಜು, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಕಸಾಪ ತೂಬಗೆರೆ ಹೋಬಳಿ ಘಟಕದ ಅಧ್ಯಕ್ಷ ಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ನಿಲಯದ ಮೇಲ್ವಿಚಾರಕ ಎ.ಅಣ್ಣಯ್ಯ, ಇಸ್ತೂರು ಕೋದಂಡರಾಮ ಭಜನಾ ಮಂಡಳಿಯು ಕಾರ್ಯದರ್ಶಿ ರಂಗಸ್ವಾಮಯ್ಯ, ಶಿಕ್ಷಕ ಕೋದಂಡರಾಮ್, ಕಲಾವಿದರಾದ ಬಾಶೆಟ್ಟಿಹಳ್ಳಿ ಮಂಜುನಾಥ್, ದರ್ಗಾಜೋಗಿಹಳ್ಳಿ ಮಲ್ಲೇಶ್ ಮುಂತಾದವರು ಭಾಗವಹಿಸಿದ್ದರು.