
ದೊಡ್ಡಬಳ್ಳಾಪುರ : ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ದೇಶದ ಉಳಿವಿಗಾಗಿ ನೀವು ಪಡೆದ ತರಬೇತಿ ಸಹಕಾರಿಯಾಗಲಿದೆ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ನಿಮ್ಮೆಲ್ಲರ ನಿಸ್ವಾರ್ಥ ಸೇವೆ ಸಲ್ಲಿಸುವಂತಗಲಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಹೇಳಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಹೊರವಲಯದ ಅನಿಬಿಸೆಂಟ್ ಪಾರ್ಕ್ ನಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಯುವ ಅಪಾಯ ಮಿತ್ರ ಯೋಜನೆ ಅಡಿಯಲ್ಲಿ ಆಯೋಜನೆ ಮಾಡಲಾಗಿದ್ದ ಯುವ ಸ್ವಯಂ ಸೇವಕರಿಗೆ ವಿಪತ್ತು ನಿರ್ವಹಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ವಿವಿಧ ನೈಸರ್ಗಿಕ ವಿಕೋಪಗಳಿಂದ ಭಾರತವು ಹಾನಿಗೊಳಗಾದ ಸಮಯದಲ್ಲಿ ವಿಪತ್ತು ನಿರ್ವಹಣಾ ತಂಡವು ತಕ್ಷಣ ನೆರವಿಗೆ ಬರುತ್ತದೆ. 7 ದಿನಗಳ ಕಾಲ ನಡೆಯುವ ಈ ತರಬೇತಿಯಲ್ಲಿ ಪ್ರತಿನಿತ್ಯ ಸಹಕಾರಿಯಾಗುವ ವಿಪತ್ತು ನಿರ್ವಹಣೆಯಿಂದ ಭೂಕಂಪ, ಅಗ್ನಿ ಅನಾಹುತ, ಪ್ರವಾಹಗಳಲ್ಲಿ ಜನರನ್ನು ರಕ್ಷಣೆ ಮಾಡುವ ವಿಧಾನ ತಿಳಿಸಲಾಗುತ್ತದೆ. ಅಲ್ಲದೇ ಮಕ್ಕಳಲ್ಲಿ ದೇಶಭಿಮಾನ, ರಾಷ್ಟ್ರೀಯತೆ ಜೊತೆಗೆ ರಾಷ್ಟ್ರ ನಿರ್ಮಾಣದ ಪರಿಕಲ್ಪನೆ ಬೆಳೆಸುವುದು ವಿಶೇಷ. ನಾವು ಸದಾ ಕೆಲಸಗಳ ಒತ್ತಡದಲ್ಲಿರುತ್ತೇವೆ ಆದರೆ ಇಂತಹ ಕಾರ್ಯಕ್ರಮಗಳಲ್ಲಿ ಬಂದು ಭಾಗವಹಿಸಿದರೆ ನಮ್ಮ ಮೈಂಡ್ ರೀಫ್ರೆಶ್ ಆಗುತ್ತೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಮಾತನಾಡಿ, ಸ್ಥಳೀಯವಾಗಿ ಯಾವುದೇ ನೈಸರ್ಗಿಕ ವಿಪತ್ತುಗಳ ಸಮಸ್ಯೆ ಇಲ್ಲದೆ ನಾವು ನೀವು ಸುರಕ್ಷಿತವಾಗಿ ಇದ್ದೇವೆ ಆದರೆ ಜಮ್ಮು ಕಾಶ್ಮೀರ, ಉತ್ತಾರಾಂಚಲ್ ಹೆಚ್ಚು ವಿಪತ್ತು ಸಂಭವಿಸುತ್ತದೆ.ನಮ್ಮ ರಾಜ್ಯದ ಕೋಸ್ಟಲ್ ಏರಿಯಾಗಳಲ್ಲಿ ಆಪತ್ತು ಸಂಭಾವಿಸುವ ಪ್ರಮಾಣ ಹೆಚ್ಚಾಗಿದ್ದು ವಿಪತ್ತು ನಿರ್ವಹಣಾ ತಂಡಗಳ ಸಹಾಯದ ಅವಶ್ಯಕತೆ ಹೆಚ್ಚಿರುತ್ತದೆ. ಇಂತಹ ತರಬೇತಿಗಳಲ್ಲಿ ಕೃಷಿ ಹೊಂಡಾ ಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದ್ದು ನಗರ ಪ್ರದೇಶಗಳಲ್ಲಿ ಕೈಗಾರಿಕಾ ಆಪತ್ತುಗಳಿಂದ ನಾವು ಬಳಲಿದ್ದೇವೆ. ಇಂತಹ ಸಮಸ್ಯೆಗಳಿಂದ ಪಾರಾಗಲು ನಿಯತಕಲಿಕಾವಾಗಿ ಮಾಕ್ ಡ್ರಿಲ್ ಮಾಡಿಸುವ ಮೂಲಕ ಜನರನ್ನು ಜಾಗೃತಿ ಮೂಡಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡುತ್ತಿದೆ ಎಂದರು.
ಕರ್ನಾಟಕ ರಾಜ್ಯ ಸ್ಕೌಟ್ಸ್ ಅಂಡ್ ಗೈಡ್ಸ್ ಆಯುಕ್ತರಾದ ಪಿ ಜಿ ಆರ್ ಸಿಂಧ್ಯಾ ಮಾತನಾಡಿ, 7 ದಿನಗಳ ಕಾಲದ ತರಬೇತಿಯಲ್ಲಿ ಸುಮಾರು 400ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತಸದ ವಿಷಯ, ನೈಸರ್ಗಿಕ ವಿಪತ್ತು ನಿರ್ವಹಣೆ ಸಂದರ್ಭಗಳಲ್ಲಿ ಯುವ ಸಮುದಾಯದ ಪಾತ್ರ ಮುಖ್ಯವಾದದ್ದು, ಪ್ರತಿನಿತ್ಯ ಅವಶ್ಯಕವಿರುವ ತರಬೇತಿಯನ್ನು ಈ ಶಿಬಿರ ನೀಡಲಿದೆ. ಈ ತರಬೇತಿ ಪಡೆದ ಪ್ರತಿ ಮಗುವಿಗೂ ಜೀವ ವಿಮೆ ಹಾಗೂ ಉಪಯುಕ್ತ ವಿಪತ್ತು ನಿರ್ವಹಣಾ ಕಿಟ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಸ್ಕೌಟ್ಸ್ ಅಂಡ್ ಗೈಡ್ಸ್ ನ ಪ್ರಮುಖರು ಹಾಜರಿದ್ದರು.