ದೊಡ್ಡಬಳ್ಳಾಪುರ : ನ 02ರಂದು ನಡೆದ ಟಿಎಪಿಎಂಸಿಎಸ್ ಚುನಾವಣೆಯಲ್ಲಿ ತಾಲೂಕಿನ ರೈತ ಮತದಾರರು ಹೆಚ್ಚಿನ ಮತಗಳನ್ನ ನೀಡುವ ಮೂಲಕ ನಮ್ಮ ಬೆಂಬಲವಾಗಿ ನಿಂತಿದ್ದಾರೆ ನಾವು ಚುನಾವಣೆಯಲ್ಲಿ ಸೋತಿದ್ದೇವೆ ಎನ್ನುವುದಕ್ಕಿಂತಲೂ ರೈತರು ನೀಡಿರುವ ಮತಗಳಿಂದ ಸಂತೋಷ ಹೆಚ್ಚಾಗಿದೆ. ತಾಲ್ಲೂಕಿನ ಎಲ್ಲಾ ಮತದಾರರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕರ್ನಾಟಕ ಸಹಕಾರಿ ಕ್ಷೇತ್ರದಲ್ಲಿ ರೈತರ ವ್ಯವಸಾಯೋತ್ಪನ್ನ ಮಾರಾಟಕ್ಕೆ ಸಹಾಯ ಕಲ್ಪಿಸುವ ನಿಟ್ಟಿನಲ್ಲಿ ರೂಪಗೊಂಡ ಸಂಸ್ಥೆಯೇ ಈ ತಾಲೂಕು ವ್ಯವಸಾಯೋತ್ಪನ್ನ ಸಹಕಾರಿ ಸಂಘ ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಚುನಾವಣೆ ಎಂಬುದು ಸಂತೆ ಮತದಾರ ಎಂಬುದು ವಸ್ತುವಂತೆ ಕೆಲ ರಾಜಕೀಯ ಪಕ್ಷಗಳು ನೋಡುತ್ತಿರುವುದು ವಿಪರ್ಯಾಸ, ರೈತರ ಸಂಸ್ಥೆಯ ಆಡಳಿತ ನಿರ್ವಹಿಸುವ ಸಲುವಾಗಿ ಸೇವೆ ಸಲ್ಲಿಸಲು ಪದಾಧಿಕಾರಿಗಳ ಆಯ್ಕೆ ಸಲುವಾಗಿ ನಡೆಯುವ ಚುನಾವಣೆಯನ್ನು ಸಂಪೂರ್ಣ ಬುಡಮೇಲೂ ಮಾಡಿದ್ದಾರೆ . ಚುನಾವಣೆಯಲ್ಲಿ ಜಯ ಸಾಧಿಸಿ ಆಯ್ಕೆಯಾದ ಅಭ್ಯರ್ಥಿಗಳು ರೈತರಿಗೆ ಸೇವೆ ಸಲ್ಲಿಸುತ್ತಾರೆ ಎಂಬುದು ಹಗಲುಗನಸಾಗಿದೆ ಎಂದರು .
Ad
ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್ ಮಾತನಾಡಿ ಸ್ಥಳೀಯ ಚುನಾವಣೆಗಳಲ್ಲಿ ರೈತರು ಭಾಗವಹಿಸಿ ಅಧಿಕಾರ ಪಡೆಯಬೇಕು ಎಂಬ ಉದ್ದೇಶದಿಂದ ತಾಲೂಕು ವ್ಯವಸಾಯೋತ್ಪನ್ನ ಸಹಕಾರಿ ಸಂಘದ ಚುನಾವಣೆಯಲ್ಲಿ ಭಾಗವಹಿಸಿದ್ದೆವು. ಮೊದಲ ಪ್ರಯತ್ನದಲ್ಲೇ ತಾಲೂಕಿನ ರೈತ ಬಾಂಧವರು ಅತಿಹೆಚ್ಚಿನ ಮತಗಳನ್ನು ನೀಡುವ ಮೂಲಕ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ನಾವು ಸೋತಿದ್ದೇವೆ ಎನ್ನುವುದಕ್ಕಿಂತ ನಮಗೆ ರೈತರು ಬೆಂಬಲ ಕೊಟ್ಟಿದ್ದಾರೆನಮಗೆ ರೈತರು ಬೆಂಬಲ ಕೊಟ್ಟಿದ್ದಾರೆ ಎಂಬ ಖುಷಿ ಇದೆ. ಇದು ಕೇವಲ ಆರಂಭ ಮಾತ್ರ ಮುಂಬರುವ ಎಲ್ಲಾ ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳು ಕಣಕ್ಕಿಳಿಯುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಸೋಲಿನ ರುಚಿ ತೋರಿಸಲಿದ್ದಾರೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಬೆಂಬಲಿತ ಅಭ್ಯರ್ಥಿ ತಿಮ್ಮಯ್ಯ ಮಾತನಾಡಿ ಚುನಾವಣೆ ಪ್ರಚಾರಕ್ಕೆ ನಮಗೆ ಸಮಯ ಅಭಾವದಿಂದ ತಾಲೂಕಿನ ಹಲವಾರು ಗ್ರಾಮಗಳಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ ಆದರೂ ನಮ್ಮನ್ನು ಬೆಂಬಲಿಸಿ ನಮಗೆ ಮತ ನೀಡಿರುವ ಎಲ್ಲಾ ರೈತರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಾವು ಭ್ರಷ್ಟಾಚಾರ ಮಾಡದೇ ಪ್ರಾಮಾಣಿಕವಾಗಿ ಚುನಾವಣೆ ಎದುರಿಸಿದ್ದೇವೆ ನಾವು ಸೊತ್ತಿಲ್ಲ , ನಮ್ಮ ಶಕ್ತಿ ಪ್ರದರ್ಶನವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ರೈತ ಮುಖಂಡರು, ಕನ್ನಡಪರ ಹೋರಾಟಗಾರರು, ಪ್ರಗತಿಪರ ಚಿಂತಕರು, ದಲಿತ ಮುಖಂಡರು ಹಾಜರಿದ್ದರು.
