ವಿಜಯಮಿತ್ರ ದೊಡ್ಡಬಳ್ಳಾಪುರ :
ನಾಗರತ್ನಮ್ಮ ಲಕ್ಷ್ಮೀನಾರಾಯಣಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಹೊಸಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಹೊನ್ನಮ್ಮ ಚಿಕ್ಕಪಾಪಯ್ಯ ಆಯ್ಕೆಯಾಗಿದ್ದಾರೆ.
24 ಮಂದಿ ಸದಸ್ಯತ್ವ ಬಲ ಹೊಂದಿರುವ ಹೊಸಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಧಿಕಾರಿ ಕೃಷಿ ಇಲಾಖೆಯ ರಾಘವೇಂದ್ರ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು.
ಈ ವೇಳೆ ಬಿಜೆಪಿ ಬೆಂಬಲಿತ ಹೊನ್ನಮ್ಮ ಚಿಕ್ಕಪಾಪಯ್ಯ ಹಾಗೂ ಕಾಂಗ್ರೆಸ್ ಬೆಂಬಲಿತ ನಾಗವೇಣಿ ನರಸಿಂಹ ಮೂರ್ತಿ ಅವರು ನಾಮಪತ್ರ ಸಲ್ಲಿಸಿದ್ದು.ಚುನಾವಣೆಯಲ್ಲಿ ಓರ್ವ ಸದಸ್ಯ ಗೈರು ಹಾಜರಾಗಿದ್ದು 23 ಮಂದಿ ಸದಸ್ಯರು ಮತದಾನ ಮಾಡಿದ್ದಾರೆ.
ಬಳಿಕ ನಡೆದ ಮತ ಎಣಿಕೆ ಕಾರ್ಯದಲ್ಲಿ ಕಾಂಗ್ರೆಸ್ ಬೆಂಬಲಿತ ನಾಗವೇಣಿ ನರಸಿಂಹ ಮೂರ್ತಿ 8 ಮತಗಳನ್ನು ಪಡೆದರೆ, ಬಿಜೆಪಿ ಬೆಂಬಲಿತ ಹೊನ್ನಮ್ಮ ಚಿಕ್ಕಪಾಪಯ್ಯ ಅವರು 15 ಮತಗಳನ್ನು ಪಡೆಯುವ ಮೂಲಕ 7 ಮತಗಳ ಅಂತರದಿಂದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೆಚ್.ಎಸ್. ಅಶ್ವಥ್ ನಾರಾಯಣಕುಮಾರ್, ಮುಖಂಡರಾದ ಲಕ್ಷ್ಮೀನಾರಾಯಣಪ್ಪ, ತಿಮ್ಮೇಗೌಡ, ಪ್ರಕಾಶ್ ರೆಡ್ಡಿ, ಮಂಜುನಾಥ್, ರಂಗಾಚಾರಿ, ಪ್ರಭು, ಅಶ್ವಥ್ ನಾರಾಯಣ ಸೇರಿದಂತೆ ಬಿಜೆಪಿ ಬೆಂಬಲಿತ ಸದಸ್ಯರು ಅಭಿನಂದನೆ ಸಲ್ಲಿಸಿದರು.
