ದೊಡ್ಡಬಳ್ಳಾಪುರ : ಕಳೆದ ಬಾರಿ 10ನೇ ತರಗತಿ ಫಲಿತಾಂಶ ಪ್ರಕಟವಾದಾಗ ನಮ್ಮ ತಾಲ್ಲೂಕಿನ ಫಲಿತಾಂಶದಲ್ಲಿ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳು ಶೇಕಡ 50ಕ್ಕಿಂತಲೂ ಕಡಿಮೆ ಫಲಿತಾಂಶ ಪಡೆದಿದ್ದು ನೋಡಿ ನನಗೆ ಬಹಳ ಬೇಸರವಾಗಿತ್ತು ಆದ ಕಾರಣ ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿದ್ಯಾಮಿತ್ರ ಆ್ಯಪ್ ಅನ್ನು ಮಕ್ಕಳ ದಿನಾಚರಣೆಯಂದು ಲೋಕಾರ್ಪಣೆ ಮಾಡಲಾಗಿದೆ ಎಂದು ಸ್ಥಳೀಯ ಶಾಸಕ ಧೀರಜ್ ಮುನಿರಾಜು ತಿಳಿಸಿದರು.

ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಹಾಗೂ ಪೋಷಕರು ಮತ್ತು ಶಿಕ್ಷಕರ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಆನ್ಲೈನ್ ತರಗತಿ ಮೂಲಕ ಕಲಿಕೆಯನ್ನು ಸರಳಗೊಳಿಸಲು ಈ ಪ್ರಯತ್ನಕ್ಕೆ ಮುಂದಾಗಿದ್ದು, ವಿಶೇಷವಾಗಿ ಮಕ್ಕಳ ದಿನಾಚರಣೆಯಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವುದು ಸಂತಸ ತಂದಿದೆ. ಈ ಬಾರಿ ತಾಲೂಕಿನಲ್ಲಿ ಒಟ್ಟು 3451 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಅದರಲ್ಲಿ 2016 ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆ ಮಕ್ಕಳಿದ್ದಾರೆ.ಅವರ ಕಲಿಕೆ ಹಾಗೂ ಮುಂಬರುವ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಅಂಜನಾದ್ರಿ ಚಾರಿಟೇಬಲ್ ಟ್ರಸ್ಟ್, ದೊಡ್ಡಬಳ್ಳಾಪುರ ಮತ್ತು ಅಮೋಘವರ್ಷ ಎಜುಕೇಷನ್ ಟ್ರಸ್ಟ್ ಇವರ ವತಿಯಿಂದ ಹತ್ತನೇ ತರಗತಿಯ ಎಲ್ಲಾ ವಿಷಯಗಳ ಪಠ್ಯಗಳಿಗೆ ಸಂಬಂಧಪಟ್ಟ ಆನ್ಲೈನ್ ತರಗತಿಗಳು ಜೊತೆಗೆ ಐದು ಪ್ರಶ್ನೆ ಪತ್ರಿಕೆ ಹಾಗೂ ಅದಕ್ಕೆ ಉತ್ತರವನ್ನು ಈ ಆಪ್ ನಲ್ಲಿ ನೀಡಲಾಗಿದೆ ಎಂದರು.

ಆಪ್ ಬಳಕೆ ಹೇಗೆ… ಆಪ್ ನಲ್ಲಿ ಏನುಂಟು..???
ವಿದ್ಯಾ ಮಿತ್ರ ಆಪ್ ಸಂಬಂಧಿತ ಕ್ಯೂಆರ್ ಕೋಡನ್ನು ತಾಲ್ಲೂಕಿನ ಪ್ರತಿ ಶಾಲೆಗೆ ನೀಡಲಾಗಿದ್ದು ಮಕ್ಕಳು ತಮ್ಮ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದಾಗ ಗೂಗಲ್ ಪ್ಲೇ ಸ್ಟೋರ್ ಮೂಲಕ ಆಪ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಅಥವಾ ನೇರವಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ವಿದ್ಯಾಮಿತ್ರ ಆಪ್ ಪಡೆಯಬಹುದಾಗಿದೆ. ನಂತರ ವಿದ್ಯಾಮಿತ್ರ ಆಪ್ ಪ್ರಾಥಮಿಕವಾಗಿ ಕೇಳುವ ಅಗತ್ಯ ದೂರವಾಣಿ ಸಂಖ್ಯೆ, ಹೆಸರು,ಸ್ಥಳ,ಶಾಲೆ ಇತರೆ ಮಾಹಿತಿ ನಮೂದಿಸಿ ಒಪ್ಪಿಗೆ ನೀಡಿದ ಕೆಲವು ಗಂಟೆಗಳಲ್ಲಿ ವಿದ್ಯಾ ಮಿತ್ರ ಆಪ್ ಕಚೇರಿಯಿಂದ ಕರೆ ಮಾಡಿ ಆಪ್ ಲಾಗಿನ್ ಮಾಡಲು ಬಳಕೆಯ ಹೆಸರು ಹಾಗೂ ಲೋಗಿನ್ ಪಾಸ್ವರ್ಡ್ ನೀಡಲಾಗುವುದು ನಂತರ ಮಕ್ಕಳು ಈ ಆಪ್ ಬಳಸಬಹುದಾಗಿದೆ.

ಪಠ್ಯ ವಿಷಯಗಳಲ್ಲಿ ಪರಿಣಿತಿ ಪಡೆದ ಶಿಕ್ಷಕರು ಪ್ರತಿ ಪಠ್ಯಗಳನ್ನು ಸರಳ ರೀತಿಯಲ್ಲಿ ಬೋಧಿಸಿರುವ ವಿಡಿಯೋಗಳು ಆಪ್ ನಲ್ಲಿ ಲಭ್ಯವಿದ್ದು, ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಕಷ್ಟ ಎನಿಸುವ ಯಾವುದೇ ಪಠ್ಯ ವಿಷಯವನ್ನು ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ವೀಕ್ಷಿಸುವ ಮೂಲಕ ಕಲಿಕೆ ಸುಲಭವಾಗಲಿದೆ ಈ ಆಪ್ ಅನ್ನು ವಿದ್ಯಾರ್ಥಿಗಳು ವಿಶೇಷ ತರಗತಿ ಅಥವಾ ಟ್ಯೂಷನ್ ರೀತಿ ಬಳಸಬಹುದಾಗಿದೆ. ತಾಲೂಕಿನ ಎಸ್.ಎಸ್.ಎಲ್. ಸಿ ಫಲಿತಾಂಶ ಉನ್ನತಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು .
ಈ ವೇಳೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಜರಿದ್ದರು.
