ದೊಡ್ಡಬಳ್ಳಾಪುರ : ಕನ್ನಡ ಭಾಷೆಯನ್ನು ಔದ್ಯೋಗಿಕ ಮತ್ತು ವಾಣಿಜ್ಯ ವಲಯಗಳಲ್ಲಿ ಬಳಸುವುದರಿಂದ ಕನ್ನಡ ಭಾಷೆಯ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ಕನ್ನಡ ಜಾಗೃತ ಸಮಿತಿ ಸದಸ್ಯ ಕೆ.ಮಹಾಲಿಂಗಯ್ಯ ತಿಳಿಸಿದರು

ಅವರು ದೊಡ್ಡಬಳ್ಳಾಪುರ ನಗರದ ಕಾರ್ಮಲ್ ಜ್ಯೋತಿ ಪ್ರೌಢಶಾಲೆಯಲ್ಲಿ ಕನ್ನಡ ಜಾಗೃತ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ 2025 ಕಾರ್ಯಕ್ರಮದಲ್ಲಿ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡದ ಅನುಷ್ಠಾನದಲ್ಲಿ ಕನ್ನಡ ಜಾಗೃತ ಸಮಿತಿಯ ಪಾತ್ರ ಎಂಬ ವಿಷಯ ಕುರಿತು ಮಾತನಾಡಿದರು. ಕೈಗಾರಿಕೆಗಳು ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕಾಗುತ್ತದೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಕೆಲಸ ಮಾಡಲು ಬರುವವರಿಗೆ ಕನ್ನಡ ಭಾಷೆಯ ಜ್ಞಾನವು ಅಗತ್ಯ ಎಂಬುದು ಮನವರಿಕೆ ಆಗಬೇಕು ಎಂದರು.
ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕನ್ನಡ ಜಾಗೃತ ಸಮಿತಿ ಜಾರಿಗೆ ಬಂದಿದೆ. ರಾಜ್ಯ ಸರ್ಕಾರವು ಸ್ಥಾಪಿಸಿರುವ ಈ ಸಮಿತಿಯು ಜಿಲ್ಲಾ ಮಟ್ಟದಲ್ಲೂ ಕಾರ್ಯನಿರ್ವಹಿಸುತ್ತದೆ. ಕನ್ನಡ ಜಾಗೃತ ಸಮಿತಿ ಜಿಲ್ಲಾ ಮಟ್ಟದಲ್ಲಿ ಕನ್ನಡ ಭಾಷೆಯ ಬಳಕೆ ಮತ್ತು ಸಂವರ್ಧನೆಯನ್ನು ಉತ್ತೇಜಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತದೆ.ಕನ್ನಡ ಕಡ್ಡಾಯವಾಗಿ ಕಲಿಸಬೇಕು ಎಂಬುದು ಕರ್ನಾಟಕ ರಾಜ್ಯದಲ್ಲಿ ಅನಿವಾರ್ಯ ಎಂಬ ವಾತಾವರಣ ನಿರ್ಮಾಣ ಆಗಬೇಕಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಷೌಷ್ಠಿಕದ ಅಗತ್ಯ ಎಂಬ ವಿಷಯ ಕುರಿತು ಮಾತನಾಡಿದ ವೈದ್ಯರಾದ ಡಾ.ಆರ್ಶಿಯಾ ಫಾರಕ್, ಪೌಷ್ಟಿಕ ಆಹಾರವು ದೇಹಕ್ಕೆ ಶಕ್ತಿ ನೀಡಲು, ಬೆಳವಣಿಗೆಗೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಲು ಸಹಾಯಕವಾಗುತ್ತದೆ. ಸಮತೋಲಿತ ಪೌಷ್ಟಿಕ ಆಹಾರವು ಕೇವಲ ತೂಕ ನಿರ್ವಹಣೆಗೆ ಮಾತ್ರವಲ್ಲದೆ, ದೈಹಿಕ ಮತ್ತು ಮಾನಸಿಕ ಕಾರ್ಯಕ್ಷಮತೆಯ ಎಲ್ಲ ಅಂಶಗಳಿಗೆ ಬೆಂಬಲ ನೀಡುತ್ತದೆ. ಪೌಷ್ಟಿಕ ಆಹಾರವು ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ, ಉತ್ತಮ ವ್ಯಕ್ತಿತ್ವ ವಿಕಸನಕ್ಕೆ ಸಹಾಯ ಮಾಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ಮಲ್ ಜ್ಯೋತಿ ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ನೀಮಾ ಕೊಪ್ಪಲ್, ಮುಖ್ಯಶಿಕ್ಷಕಿ ಎಸ್. ರೇಣುಕಾ, ಶಿಕ್ಷಕರುಗಳಾದ ದ್ವಾರಕೀನಾಥ್, ರುದ್ರೇಶ್, ಅರ್ಚನ, ನವೋದಯ ಶಾಲೆಯ ನಿವೃತ್ತ ಶಿಕ್ಷಕ ವಿ.ಎಸ್.ಹೆಗಡೆ, ನಿವೃತ್ತ ಮುಖ್ಯಶಿಕ್ಷಕ ಕೆ.ಎಲ್. ರಾಜಣ್ಣ, ವೈದ್ಯೆ ಡಾ.ವಿ.ಸುಚಿತ್ರ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಸಾಸಲು ಹೋಬಳಿ ಘಟಕದ ಅಧ್ಯಕ್ಷ ಜಿ.ಎಂ.ನಾಗರಾಜು, ಕಲಾವಿದರಾದ ನಾಗರತ್ನಮ್ಮ, ದರ್ಗಾಜೋಗಿಹಳ್ಳಿ ಮಲ್ಲೇಶ್, ಸಫೀರ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
