ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಉತ್ತಮ ಆಡಳಿತ ಸಪ್ತಾಹ-2025 ಅಂಗವಾಗಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಪೋಸ್ಟರ್ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು ಭಾರತ ಸರ್ಕಾರದ ಸಿಬ್ಬಂದಿ, ಸಾರ್ವಜನಿಕ ಅಹವಾಲುಗಳು ಮತ್ತು ಪಿಂಚಣಿ ಸಚಿವಾಲಯದ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಅಹವಾಲುಗಳ ಇಲಾಖೆ (DARPG) ವತಿಯಿಂದ 2025 ರ ಡಿಸೆಂಬರ್ 19 ರಿಂದ 25 ರವರೆಗೆ “ಸುಶಾಸನ ಸಪ್ತಾಹ – ಪ್ರಷಾಸನ್ ಗಾಂವ್ ಕಿ ಓರೆ” ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಈ ಅಭಿಯಾನದ ಉದ್ದೇಶ ಸಾರ್ವಜನಿಕ ಸೇವೆಗಳ ಪೂರೈಕೆ, ಸಾರ್ವಜನಿಕ ಅಹವಾಲುಗಳ ಪರಿಹಾರ ಮತ್ತು ಸುಶಾಸನ ಅಭ್ಯಾಸಗಳನ್ನು ಗ್ರಾಮ ಮಟ್ಟದವರೆಗೂ ಬಲಪಡಿಸುವುದು.
ಸಾರ್ವಜನಿಕರಿಗೆ ಸರ್ಕಾರದ ಸೇವೆಗಳ ಲಭ್ಯತೆ. ಪಾರದರ್ಶಕತೆ ಮತ್ತು ಅರಿವು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕಾಗಿದ್ದು ಸಾರ್ವಜನಿಕ ಕುಂದು ಕೊರತೆಗಳಿಗೆ ತ್ವರಿತ ಪರಿಹಾರ ಮತ್ತು ಸೇವಾ ವಿತರಣೆಯನ್ನು ಸುಧಾರಿಸುವುದು ಸಪ್ತಾಹದ ಮುಖ್ಯ ಉದ್ದೇಶವಾಗಿದೆ. ಜೊತೆಗೆ ಈ ಅಭಿಯಾನ ಸಂದರ್ಭದಲ್ಲಿ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಕಚೇರಿಗಳಲ್ಲಿ ಇದ್ದು ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವ ಮೂಲಕ ಉತ್ತಮ ಆಡಳಿತ ಒದಗಿಸಿ ಎಂದರು.
ಸರ್ಕಾರಿ ಸೇವೆಗಳು ಮತ್ತು ಸಾರ್ವಜನಿಕ ಅಹವಾಲು ನಿವಾರಣೆ ಕುರಿತು ಜಾಗೃತಿ ಕಾರ್ಯಕ್ರಮ. ಡಿಜಿಟಲ್ ಸೇವಾ ವಿತರಣೆಗೆ ಸಂಬಂಧಿಸಿದ ಮಾಹಿತಿಯ ಜನಜಾಗೃತಿ. ಅಭಿಯಾನದ ಅವಧಿಯಲ್ಲಿ ವಿಶೇಷ ಶಿಬಿರಗಳ ಆಯೋಜನೆ. 2025ರ ಡಿಸೆಂಬರ್ 23ರಂದು ಸುಶಾಸನ ಅಭ್ಯಾಸಗಳ ಕುರಿತು ಗ್ರಾಮ, ತಾಲ್ಲೂಕು ಮಟ್ಟದಲ್ಲಿ ಕಾರ್ಯಾಗಾರ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿ ತ್ವರಿತ ಪರಿಹಾರ ಕ್ರಮಗಳು ಕೈಗೊಳ್ಳಿ ಎಂದರು.
ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಯೋಜನಾ ನಿರ್ದೇಶಕ ವಿಠ್ಠಲ ಕಾವ್ಳೆ, ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
