ದೊಡ್ಡಬಳ್ಳಾಪುರ : ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ 19 ಸ್ಥಾನಗಳಿಗೆ ಹಾಗೂ ದೊಡ್ಡಬಳ್ಳಾಪುರ ನಗರಸಭೆಯ 1 ವಾರ್ಡ್ ಗೆ ಸಂಬಂಧಿಸಿದಂತೆ ಡಿ. 21ರಂದು ನಡೆದ ಚುನಾವಣೆಯ ಫಲಿತಾಂಶ ಇಂದು (ಡಿ. 24 ) ರಂದು ಪ್ರಕಟವಾಗಿದ್ದು. ಶಾಸಕ ಧೀರಜ್ ಮುನಿರಾಜು ನೇತೃತ್ವದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.
ಫಲಿತಾಂಶ ಪ್ರಕಟವಾದ ಬಳಿಕ ಮಾಧ್ಯಮಗಳೊಂದಿಗೆ ಶಾಸಕ ಧೀರಜ್ ಮುನಿರಾಜು ಮಾತನಾಡಿ ಬಿಜೆಪಿ ಭದ್ರಕೋಟೆ ಬರೀ ಮಂಗಳೂರು, ಉತ್ತರ ಕನ್ನಡ ಅಲ್ಲ, ಬೆಂಗಳೂರು ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಕೂಡ ಎಂಬುದನ್ನು ಮುಂದಿನ ದಿನಗಳಲ್ಲಿ ತೋರಿಸುತ್ತೇವೆ. ಪ್ರಸ್ತುತ ಚುನಾವಣೆಯ ಫಲಿತಾಂಶ ಇದಕ್ಕೆ ಉದಾಹರಣೆ ಎಂದರು.
ಬಿಜೆಪಿ ಅಭ್ಯರ್ಥಿಗಳ ಪರವಾಗಿ 10 ದಿನಗಳ ಕಾಲ ನಡೆದ ಅಧಿವೇಶನದಲ್ಲಿ ಒಂದು ದಿನ ಮಾತ್ರ ಭಾಗವಹಿಸಿದ್ದೇನೆ ಇನ್ನುಳಿದ ಎಲ್ಲಾ ದಿನಗಳಲ್ಲೂ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಸಲುವಾಗಿ ನಾನು ಪ್ರತಿ ಮತದಾರನ ಮನೆಗೆ ಹೋಗಿ ಮತಯಾಚನೆ ಮಾಡಿದ್ದೇನೆ. ಮತ ಕೇಳೋದು ನನ್ನ ಕರ್ತವ್ಯ. ನಮ್ಮ ಶ್ರಮಕ್ಕೆ, ನಮ್ಮ ನಿಷ್ಠೆ, ಪ್ರಾಮಾಣಿಕತೆಗೆ ಮತದಾರ ಕೈಹಿಡಿದ್ದಾನೆ. ಇಲ್ಲಿ ಕಾಂಗ್ರೆಸ್ಸು ಇಲ್ಲ ಗ್ಯಾರಂಟಿನೂ ಇಲ್ಲ ಗ್ಯಾರಂಟಿಗೆ ವಾರೆಂಟಿ ಮುಗಿದಿದೆ. ಗ್ಯಾರಂಟಿನ ಜನ ಮನೆಕಡೆ ಕಳುಹಿಸುತ್ತಾರೆ ಎಂದರು.
ನಗರಸಭೆಯ ಹೇಮಾವತಿ ಪೇಟೆ ಉಪಚುನಾವಣೆಯಲ್ಲಿಯೂ ಬಿಜೆಪಿ ಸಾಧಿಸಿದೆ ಅದು ಬಿಜೆಪಿ ಭದ್ರಕೋಟೆ, ನನ್ನ ಚುನಾವಣೆಯಲ್ಲೂ ಅತಿ ಹೆಚ್ಚು ಲೀಡ್ ಕೊಟ್ಟಿತು ಎಂದರು.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ನಾವು ಇನ್ನೂ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಾಗಿತ್ತು. ಕಾರಣಾಂತರಗಳಿಂದ ಅದು ಆಗಿಲ್ಲ. ಅರೆಹಳ್ಳಿ ಗುಡ್ಡದಹಳ್ಳಿ ಕ್ಷೇತ್ರದ ಗುಂಡಣ್ಣ ಹೃದಾಯಾಘಾತದಿಂದ ಮರಣಹೊಂದಿದ ಕಾರಣ ಅಲ್ಲಿ ಸೋತಿದ್ದೇವೆ. ಪ್ರಾಮಾಣಿಕ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ನಾವು, ಸಂಘಟನೆ, ಮುಖಂಡರು, ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದೇವೆ ಎಂದರು.
ನನ್ನ ಎರಡೂವರೆ ವರ್ಷಗಳ ಕೆಲಸದಲ್ಲಿ ಬಾಶೆಟ್ಟಿಹಳ್ಳಿ ಆರನೇ ಹಂತದಲ್ಲಿ ಕಾವೇರಿ ನೀರನ್ನು ಹರಿಸಲು ಶ್ರಮಿಸಿದ್ದೇನೆ. 41 ಕೋಟಿ ವೆಚ್ಚದಲ್ಲಿ ಮನೆ ಮನೆಗೆ ಜಲಜೀವನ್ ಮಿಷನ್ ಯೋಜನೆ ತಂದಿದ್ದೇನೆ. ಉಚಿತವಾಗಿ ಐದೂವರೆ ಎಕರೆ ಜಾಗ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಿಸಲಾಗಿದೆ. 20 ಕಸ ವಾಹನಗಳನ್ನು ಕೊಟ್ಟಿದ್ದೇನೆ. ಮೂರವರೆ ಕೋಟಿ ಇದ್ದಂತಹ ಆದಾಯವನ್ನು 12ಕೋಟಿಗೆ ಏರಿಸಲಾಗಿದೆ. ಭ್ರಷ್ಟಾಚಾರ ರಹಿತ ಆಡಳಿತ, ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಖಾತೆಗಳನ್ನು ಮಾಡಿಸಿದ್ದೇವೆ. ಹೀಗೆ ಪ್ರಾಮಾಣಿಕತೆ, ಪಕ್ಷ ನಿಷ್ಠೆಯಿಂದ ಬಿಜೆಪಿ ಗೆದ್ದಿದೆ ಎಂದು ಹೇಳಿದರು….
