ದೊಡ್ಡಬಳ್ಳಾಪುರ : ಸಮ ಸಮಾಜದ ನಿರ್ಮಾಣಕ್ಕಾಗಿ ದುಡಿಯುವ ಪ್ರತಿಯೊಬ್ಬರೂ ಮಾದರಿ. ಸಮಾಜದಿಂದ ನಾವೇನು ಪಡೆಯಬಹುದು ಎಂಬ ಯೋಚನೆಯೊಂದಿಗೆ ಮಾಡುವ ಸಮಾಜ ಸೇವಾಕಾರ್ಯಗಳೇ ಹೆಚ್ಚಾಗಿರುವ ಸಮಯದಲ್ಲಿ ಮಲ್ಲೇಶ್ ಮತ್ತು ತಂಡ ನಿಸ್ವಾರ್ಥ ಸೇವಕರಾಗಿ ಕಳೆದ 2100 ದಿನಗಳಿಂದ ನಿರ್ಗತಿಕರಿಗೆ,ವಯೋವೃದ್ದರಿಗೆ, ಹಸಿದವರಿಗೆ ನಿರಂತರ ಅನ್ನದಾಸೋಹ ನಡೆಸಿಕೊಂಡು ಬರುತ್ತಿದ್ದಾರೆ ಅವರ ತಂಡಕ್ಕೆ ಶುಭವಾಗಲಿ ಎಂದು ಚಿತ್ರನಟ ಅಹಿಂಸಾ ಚೇತನ್ ತಿಳಿಸಿದರು.

ನಗರದ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ನಿರಂತರ ಅನದಾಸೋಹ ಸಮಿತಿಯ 2100ನೇ ದಿನದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಮಾಜಕ್ಕೆ ಒಳಿತು ಮಾಡಲು ಪ್ರಮುಖವಾಗಿ ಜನಜಾಗೃತಿ, ಹೋರಾಟ ಮತ್ತು ಸೇವೆಗಳ ಮೂಲಕ ಶ್ರಮಿಸಬಹುದಾಗಿದೆ . ಸಂವಿಧಾನವು ನಮಗೆ ಸಮ ಸಮಾಜದ ಪರಿಕಲ್ಪನೆಯನ್ನು ನೀಡಿದೆ. ದೇಶದ ಸಮಗ್ರ ಅಭಿವೃದ್ಧಿ ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಸಮ ಸಮಾಜದ ಕನಸು ನನಸಾಗಬೇಕಿದೆ ಆ ದಿಕ್ಕಿನಲ್ಲಿ ನಾವೆಲ್ಲರೂ ಸಾಗುವ ಮೂಲಕ ಮುಂದಿನ ಪೀಳಿಗೆಗೆ ಸಮೃದ್ಧ ಸಮಗ್ರ ಸಮಾಜವನ್ನು ನೀಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.

ದೇಶದಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಹೆಚ್ಚಿಸುವ ಹಾಗೂ ಮಕ್ಕಳಲ್ಲಿ ವೈಜ್ಞಾನಿಕ ಪರಿಕಲ್ಪನೆಗಳನ್ನು ಪ್ರೋತ್ಸಾಹಿಸುವ ಮೂಲಕ ದೇಶದ ಅಭಿವೃದ್ಧಿಪಥವನ್ನು ಸುಗಮಗೊಳಿಸಬಹುದಾಗಿದೆ.ಮೂಢನಂಬಿಕೆಗಳಿಂದ ಹೊರಬಂದು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಪ್ರಜ್ಞಾವಂತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ನಿರಂತರ ಅನ್ನದಾಸೋಹ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು

ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಸದಾ ದಾನಿಗಳ ನೆರವಿನಿಂದ ನಡೆಯುವ ಈ ಕಾರ್ಯಕ್ರಮವು ನೂರಾರು ಕಡು ಬಡವರಿಗೆ, ವೃದ್ಧರಿಗೆ, ಹಸಿದ ಹೊಟ್ಟೆಗಳಿಗೆ ಅಕ್ಷಯ ಪಾತ್ರೆಯಾಗಿದೆಯೆಂದರೆ ತಪ್ಪಾಗಲಾರದು, 2100 ನೇ ದಿನದ ಈ ಅನ್ನದಾಸೋಹ ಕಾರ್ಯಕ್ರಮವು ಎಷ್ಟೋ ಕುಟುಂಬಗಳಿಗೆ ಆಸರೆಯಾಗಿದೆ. ದಿನದಿಂದ ದಿನಕ್ಕೆ ಆಹಾರ ಬಯಸಿ ಬರುವ ಜನರು ಹೆಚ್ಚಾಗುತ್ತಿದ್ದಾರೆ. ನಮಗೆ ದಾನಿಗಳ ಅವಶ್ಯಕತೆ ಹೆಚ್ಚಾಗಿದೆ ಅನ್ನದಾಸೋಹಕ್ಕೆ ಮುಂದಾಗುವ ದಾನಿಗಳು ತಮ್ಮ ವಿಶೇಷ ದಿನಗಳನ್ನು ನಮ್ಮ ನಿರಂತರ ಅನ್ನದಾಸಾಹ ಸಮಿತಿ ಇಟ್ಟಿಗೆ ಆಚರಿಸಬೇಕೆಂದು ಮನವಿ ಮಾಡುತ್ತೇವೆ ಎಂದರು.

ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಶಿಕಲಾ ನಾಗರಾಜ್ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮವು ನಿರಂತರವಾಗಿ ಸಾಗುತ್ತಿದೆ. ಪ್ರತಿನಿತ್ಯ ನೂರಾರು ಜನರು ಇಲ್ಲಿಗೆ ಆಹಾರ ಬಯಸಿ ಬರುತ್ತಾರೆ ಮಲ್ಲೇಶ್ ಮತ್ತು ತಂಡ ನಿತ್ಯ ನಿರಂತರ ದಾನಿಗಳ ನೆರವಿನಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಈ ಸೇವಾ ಕಾರ್ಯಕ್ರಮವು ಹೀಗೆ ನಿರಂತರ ಸಾಗಲಿ ನಮ್ಮ ಬೆಂಬಲ ಮಲ್ಲೇಶ್ ಮತ್ತು ತಂಡಕ್ಕೆ ಸದಾ ಇರುತ್ತದೆ ಎಂದರು.

ಶ್ರೀರಾಮ್ ಸೇನೆಯ ರಾಜ್ಯ ಧರ್ಮ ಪ್ರಚಾರಕರಾದ ಶ್ರೀನಿವಾಸ್ ಗುರೂಜಿ ಮಾತನಾಡಿ ದಾನಗಳಲ್ಲಿ ಶ್ರೇಷ್ಠದಾನ ಅನ್ನದಾನವು ಸಹ ಆಗಿದೆ ಇಂತಹ ಸೇವಾಕಾರ್ಯವನ್ನು ನಿರಂತರವಾಗಿ 2,100 ದಿನಗಳಿಂದ ಮಾಡಿಕೊಂಡಿರುವ ಅನ್ನದಾಸೋಹ ಸಮಿತಿಕಾರ್ಯ ಶ್ಲಾಘನೀಯ ನಮ್ಮ ಶ್ರೀರಾಮ ಸೇನೆ ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಸದಾ ಇರುತ್ತದೆ ಸಮಿತಿಯ ಎಲ್ಲರಿಗೂ ಶುಭವಾಗಲಿ ಎಂದರು.

ಈ ವೇಳೆ ಮಾಜಿ ನಗರ ಸಭಾ ಅಧ್ಯಕ್ಷರಾದ ಪಿ ಸಿ ಲಕ್ಷ್ಮೀ ನಾರಾಯಣ್, ಸಮಾಜ ಸೇವಕರಾದ ಸಹದೇಶ್.ಟೀ.ಎಂ, ಸಮಾಜ ಸೇವಕ ಸೆಲ್ವಂ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆಯ ರಾಜ್ಯಾಧ್ಯಕ್ಷ ಎಚ್. ರಾಘವೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎಚ್ ಶಿವಕುಮಾರ್,ಚಿತ್ರನಟ ವೀಡಾ ಸುಧೀರ್,ಚಿತ್ರನಟಿ ಸುವರ್ಣ,ಚಿತ್ರನಟಿ ಲಕ್ಷ್ಮಿ ಮುಖಂಡರಾದ ಜಿ.ರಂಗಸ್ವಾಮಿ,ಪ್ರವೀಣ್,ರುದ್ರೇಶ್ ಕೆ.ಸಿ, ಅಂಗನವಾಡಿ ಕಾರ್ಯಕರ್ತೆ ಶೈಲಜಾ ಗೌಡ,ಮೇಘನಾ,ಎ.ಸಿ.ಅಶೋಕ್,ಜ್ಯೂನಿಯರ್ ರಾಜ್ ಕುಮಾರ್, ಡಿ.ಸಿ.ಚೌಡರಾಜ್, ಸುರೇಶ, ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
