ದೊಡ್ಡಬಳ್ಳಾಪುರ : ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿಗಳು ಕನ್ನಡ ಸಾಹಿತ್ಯ ಮತ್ತು ಬರಹಗಾರರನ್ನು ಸೇರಿದಂತೆ ವಿವಿಧ ಪ್ರತಿಭಾವಂತರನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ಸಹಕಾರಿ ಆಗಿವೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪಿ.ಎನ್.ಶೇಷಾದ್ರಿ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ನಗರದ ತಾಲ್ಲೂಕು ಪಂಚಾಯಿತಿ ಸಮೀಪದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಎಂ.ಎ.ಖಲೀಲುಲ್ಲಾಖಾನ್ ದತ್ತಿ ಮತ್ತು ಡಿ.ವಿ.ಪದ್ಮಾವತಮ್ಮ ಶೈಕ್ಷಣಿಕ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ದಾನಿಗಳ ಸೇವಾ ಕಾರ್ಯ ಶ್ಲಾಘನೀಯವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ, ತಾಲ್ಲೂಕು, ಹೋಬಳಿ ಘಟಕಗಳು ಕನ್ನಡ ಭಾಷೆ ಮತ್ತು ಸಾಹಿತ್ಯ ಕುರಿತು ಪ್ರತಿ ವರ್ಷ ನಡೆಸುತ್ತಿರುವ ಹಲವಾರು ಕಾರ್ಯಕ್ರಮಗಳು ಕನ್ನಡ ಉಳಿಸಿ ಬೆಳೆಸಲು ಸಹಕಾರಿ ಆಗಿವೆ ಎಂದರು.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಕನ್ನಡ ಭಾಷೆಯನ್ನು ಎಲ್ಲೆಡೆ ಬಳಸಿದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಹಕಾರಿ ಆಗುತ್ತದೆ. ವಿದ್ಯಾರ್ಥಿಗಳು ಪಠ್ಯಪುಸ್ತಕಗಳಷ್ಟೇ ಸೀಮಿತ ಆಗಬಾರದು. ಕನ್ನಡ ಸಾಹಿತ್ಯ ಪುಸ್ತಕಗಳನ್ನು ಓದುವ ಕಡೆಗೂ ಆದ್ಯತೆ ನೀಡಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಭಾ ಮಾತ್ರ ಮನ್ನಣೆ ದೊರೆಯುತ್ತದೆ. ಪ್ರತಿಭಾವಂತರನ್ನು ಪ್ರೋತ್ಸಾಹಿಸಿದಾಗ ಮಾತ್ರ ಅವರು ಉತ್ತಮ ಸಾಧಕರಾಗಲು ಸಾಧ್ಯವಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿಗಳು ಪ್ರತಿಭಾವಂತರನ್ನು ಪ್ರೋತ್ಸಾಹಿಸಲು ಸಹಕಾರಿ ಎಂದರು.
ಪ್ರತಿಭಾವಂತ ವಿದ್ಯಾರ್ಥಿನಿ ಎಂ.ಲಾವಣ್ಯ ಅವರನ್ನು ಅಭಿನಂದಿಸಿದ ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ಸಿ.ವೆಂಕಟರಾಜು, ದತ್ತಿ ದಾನಿ ಡಿ.ವಿ.ಪದ್ಮಾವತಮ್ಮ, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಎ.ಜಯರಾಮ್, ಸಾಸಲು ಕಸಾಪ ಘಟಕದ ಅಧ್ಯಕ್ಷ ಜಿ.ಎಂ.ನಾಗರಾಜು, ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿ ಕೋದಂಡರಾಮ್, ನಂಜುಂಡರಾವ್, ವಿದ್ಯಾರ್ಥಿ ನಿಲಯ ಪಾಲಕರುಗಳಾದ ಸಿ.ಅಣ್ಣಯ್ಯ, ರೂಬಿಯಾ ಮುಂತಾದವರು ಭಾಗವಹಿಸಿದ್ದರು.
