ದೊಡ್ಡಬಳ್ಳಾಪುರ : ಪ್ರಸ್ತುತ ಸಾಲಿನ ಪರೀಕ್ಷೆಗಳು ಇನ್ನೇನು ಸಮೀಪಿಸುತ್ತಿವೆ. ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ಹೆಚ್ಚಿನ ಗಮನವನ್ನು ಕೊಡುತ್ತಾ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬೈಲಾಂಜಿನಪ್ಪ ತಿಳಿಸಿದರು.

ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಗುರುಕುಲ ಇಂಟರ್ನ್ಯಾಷನಲ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರಬೇಕು, ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವು ನಮ್ಮ ಜಿಲ್ಲೆಯಲ್ಲಿಯೇ ಇರುವ ಕಾರಣ ಹೊರದೇಶಗಳಿಂದ ಬರುವ ಮಾದಕ ವಸ್ತುಗಳು ಶಾಲಾ ಕಾಲೇಜುಗಳ ಮಕ್ಕಳ ಕೈಗೆಸಿಗುವಂಥಾಗಿದೆ. ಮಾದಕ ವಸ್ತುಗಳಿಂದ ಮಕ್ಕಳನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಮಿತಿ ರಚಿಸಲಾಗಿದೆ ಅಧಿಕಾರಿಗಳು ಬಿ ಆರ್ ಪಿ ಮತ್ತು ಸಿ ಆರ್ ಪಿ ಗಳಿಗೆ ಮಾದಕ ವಸ್ತುಗಳಿಂದ ಮಕ್ಕಳನ್ನು ರಕ್ಷಿಸುವ ಕುರಿತು ತರಬೇತಿ ನೀಡಿದ್ದು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುತ್ತದೆ. ಈ ಸಮಿತಿ ವತಿಯಿಂದ ಪ್ರತಿ ಶಾಲೆ ಶಿಕ್ಷಕರ ಮೂಲಕ ಮಕ್ಕಳಿಗೆ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ ಎಂದರು.
ಗಣ್ಯರು ದೀಪ ಬೆಳಗಿಸುವ ಮೂಲಕ ಶಾಲಾ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು

ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರು ಹಾಗೂ ಗುರುಕುಲ ವಿದ್ಯಾಸಂಸ್ಥೆಯ ಖಜಾಂಚಿ ಗಂಗಾಮರೇಗೌಡ ಮಾತನಾಡಿ ಇಂದು ಮಕ್ಕಳ ಹಬ್ಬ , ಮಕ್ಕಳ ಶೈಕ್ಷಣಿಕ ಸಾಧನೆ ಜೊತೆಗೆ ಕ್ರೀಡೆ ಹಾಗೂ ಸಂಸ್ಕೃತಿಕ ಚಟುವಟಿಕೆಗಳು ಅತ್ಯಗತ್ಯವಾಗಿರುತ್ತದೆ .ಈ ನಿಟ್ಟಿನಲ್ಲಿ ಪ್ರತಿ ವರ್ಷ ನಡೆಸುವ ವಾರ್ಷಿಕೋತ್ಸವ ಸಮಾರಂಭವು ವಿಶೇಷವಾಗಿರುತ್ತದೆ. ಈ ಬಾರಿಯ ಶಾಲಾ ವಾರ್ಷಿಕೋತ್ಸವದಲ್ಲಿ 70 ಜನ ಮಕ್ಕಳು ನಿರೂಪಣೆ ಮಾಡುತ್ತಿರುವುದು ವಿಶೇಷವಾಗಿದೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಗುರುಕುಲ ಇಂಟರ್ನ್ಯಾಷನಲ್ ಸ್ಕೂಲ್ ಶ್ರಮಿಸುತ್ತದೆ ಎಂದರು.

ಶಾಲಾ ಅಧ್ಯಕ್ಷ ಎಸ್ .ಆರ್. ರಮೇಶ್ ಮಾತನಾಡಿ ನಮ್ಮ ಶಾಲೆಯಲ್ಲಿ ಪ್ರತಿ ಮಗುವಿಗೂ ವಿಶೇಷ ಗಮನ ಕೊಡುವ ಮೂಲಕ ಮಕ್ಕಳಲ್ಲಿನ ವಿಶೇಷ ಗುಣಗಳನ್ನು ಹೊರ ತೆಗೆಯಲಾಗುತ್ತದೆ. ಉತ್ತಮ ಶೈಕ್ಷಣಿಕ ಬೆಳವಣಿಗೆ ಜೊತೆಜೊತೆಗೆ ಕಲೆ, ಸಂಸ್ಕೃತಿ, ಕ್ರೀಡೆ, ಹಾಗೂ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನಮ್ಮ ಶಿಕ್ಷಕರ ತಂಡ ಶ್ರಮಿಸುತ್ತಿದೆ. ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣವಿದ್ದು ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಹೊಂದಿಕೊಳ್ಳುವ ಮೂಲಕ ಉತ್ತಮ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಈ ವೇಳೆ ಜ್ಞಾನೋದಯ ಎಜುಕೇಶನ್ ಟ್ರಸ್ಟ್ ನ ಉಪಾಧ್ಯಕ್ಷರಾದ ಶ್ರೀನಿವಾಸ್ ಮೂರ್ತಿ ಕೆ ಜಿ ಎಸ್, ಕಾರ್ಯದರ್ಶಿ ಎ. ಎನ್.ಲೋಕೇಶ್ ಕುಮಾರ್, ಜಂಟಿ ಕಾರ್ಯದರ್ಶಿ ಹೃತಿಕ್ ನರೇಂದ್ರ, ಗುರುಕುಲ ಇಂಟರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ಕೆ ಎಸ್ ಲೋಕೇಶ್, ಉಪ ಪ್ರಾಂಶುಪಾಲರು ಬಿ ವೈ ಶರಣಪ್ಪ ಸೇರಿದಂತೆ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಿದ್ದರು.

