ಪೂರ್ಣಗೊಳ್ಳದ ರಸ್ತೆ ಕಾಮಗಾರಿ : ಪ್ರಶ್ನೆ ಮಾಡಿದ ಪತ್ರಕರ್ತರಿಗೆ ಉಡಾಫೆ ಉತ್ತರ ಕೊಟ್ಟ ಗುತ್ತಿಗೆದಾರ

ದೊಡ್ಡಬಳ್ಳಾಪುರ : ತಾಲ್ಲೂಕಿನ ಹೊಸಹಳ್ಳಿ ವ್ಯಾಪ್ತಿಯ ದೊಡ್ಡಹಳ್ಳ ಸಮೀಪದಿಂದ ಗುಂಡಮಗೆರೆ-ಹೊಸಹಳ್ಳಿ ಮಾರ್ಗವಾಗಿ ಸಾಗುವ ರಸ್ತೆಗೆ ಹಲವು ದಶಕಗಳ ನಂತರ ಡಾಂಬರು ಕೆಲಸ ನಡೆಯುತ್ತಿದೆ. ಆದರೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.

 

ಕಾಮಗಾರಿಯ ಗುತ್ತಿಗೆದಾರರಾದ ಕಾರನಾಳ ಅಶ್ವಥನಾರಾಯಣ ಅವರಿಗೆ ಕಾಮಗಾರಿ ಕುರಿತು ಮಾಹಿತಿ ಪಡೆಯಲು ಓರ್ವ ಪತ್ರಕರ್ತರೊಬ್ಬರು ಕರೆ ಮಾಡಿದಾಗ ಬೇಜವಾಬ್ದಾರಿಯಾಗಿ ಉತ್ತರಿಸಿದ್ದಾರೆ.ರಸ್ತೆ ಕಾಮಗಾರಿ ಬೇಗ ಮುಗಿಸುವಂತೆ ಹೇಳಿದ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಎಇಇ ಪುರುಷೋತ್ತಮ ಅವರಿಗೂ ಡೋಂಟ್ ಕೇರ್ ಎಂಬಂತೆ ಉತ್ತರ ನೀಡಿದ್ದಾರೆ.

 

ರಸ್ತೆಯ ಅಧ್ವಾನದ ಕುರಿತು ವರದಿ ಮಾಡಲು ಗುತ್ತಿಗೆದಾರರಿಗೆ ದೂರುವಾಣಿ ಕರೆ ಮಾಡಿ ‘ಈ ರಸ್ತೆ ಕಾಮಗಾರಿ ಇಷ್ಟು ನಿಧಾನವಾಗಿ ನಡೆಯುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಪಘಾತಗಳು ಆಗುತ್ತಿವೆ ಎಂದು ಸಾರ್ವಜನಿಕರ ಪರ ಕಳಕಳಿ ವ್ಯಕ್ತಪಡಿಸಿದರೆ, ಗುತ್ತಿಗೆದಾರ ನೀನ್ಯಾರು ಕೇಳಲಿಕ್ಕೆ, ನನ್ನತ್ರ ದುಡ್ಡಿಲ್ಲ, ದುಡ್ಡು ಬಂದಾಗ ಮಾಡುತ್ತೇನೆ ಎಂದು ಮಾತನಾಡಿದರು ಎಂದು ಪತ್ರಕರ್ತ ರಮೇಶ್ ಬಾಬು ತಿಳಿಸಿದ್ದಾರೆ.

 

ಇನ್ನು ದಿನಾಂಕ 24-10-2025ರಂದು ಕಾಮಗಾರಿ ಪ್ರಾರಂಭ ಮಾಡಲಾಗಿದ್ದು, ಇದೂವರೆಗೂ ಮುಕ್ತಾಯಗೊಳಿಸದೇ ಮೀನಾಮೇಷ ಎಣಿಸಲಾಗುತ್ತಿದೆ.ಗುತ್ತಿಗೆದಾರ ಕಾಮಗಾರಿ ಪೂರ್ಣಗೊಳಿಸದ ಕಾರಣ ಮನೆಯೊಳಗೆ ಧೂಳು ಆವರಿಸುತ್ತಿದೆ. ಮೇಲಾಗಿ ರಸ್ತೆ ಅಕ್ಕಪಕ್ಕದ ಹೊಲಗಳ ಬೆಳೆಗಳಿಗೆ ಸಮಸ್ಯೆ ಎದುರಾಗಿದೆ ಎಂದು ಹೊಸಹಳ್ಳಿ ಗ್ರಾಮಸ್ಥರು ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 

ಪ್ರತಿನಿತ್ಯ ಓಡಾಡುವ ವಾಹನ ಸವಾರರಿಗೆ ನರಕಯಾತನೆ

ತಾಲೂಕಿನ ಗುಂಡಮಗೆರೆ ರಸ್ತೆಯ ಬಂಡಿಹಳ್ಳದಿಂದ ಹೊಸಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆ(3.70KM) ಸಂಪೂರ್ಣ ಗುಂಡಿ ಬಿದ್ದು ಹಾಳಾಗಿತ್ತು. ಈ ಭಾಗದ ಜನರ ಅನುಕೂಲಕ್ಕಾಗಿ ಕೆಲವು ತಿಂಗಳ ಹಿಂದೆ ರಸ್ತೆ ದುರಸ್ತಿ ಕಾಮಗಾರಿ ಪ್ರಾರಂಭ ಮಾಡಲಾಗಿತ್ತು. ರಸ್ತೆಗೆ ಜಲ್ಲಿಕಲ್ಲು ಹಾಕಲಾಗಿದೆ ಅಷ್ಟೇ. ಸಂಪೂರ್ಣವಾಗಿ ಕೆಲಸ ಪೂರ್ಣಗೊಳಿಸಲು ಗುತ್ತಿಗೆದಾರ ಹಿಂದೇಟು ಹಾಕುತ್ತಿರುವುದರಿಂದ ಕಾಮಗಾರಿ ನೆನಗುದಿಗೆ ಬಿದ್ದಿದೆ. ಇದರಿಂದಾಗಿ ಈ ರಸ್ತೆಯ ಇಕ್ಕೆಲಗಳಲ್ಲಿರುವ ಹೊಲಗಳು, ಈ ರಸ್ತೆಯಲ್ಲಿ ಪ್ರತಿನಿತ್ಯ ಓಡಾಡುವ ವಾಹನ ಸವಾರರು ನರಕಯಾತನೆ ಅನುಭವಿಸಲಾಗುತ್ತಿದೆ.

 

ಈ ಕುರಿತು ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಲಕ್ಷ್ಮೀಪತಿ ಪ್ರತಿಕ್ರಿಯಿಸಿ, ಗುತ್ತಿಗೆದಾರ ದರ್ಪ ಮೆರೆದಿದ್ದರೆ ನಾವು ಖಂಡಿಸುತ್ತೇವೆ. ಸರ್ಕಾರ ಹಣ ಕೊಟ್ಟಿಲ್ಲ ಅಂತಾ ಹೇಳಬಾರದು, ಕಾಮಗಾರಿ ಪೂರ್ಣಗೊಂಡ ನಂತರ ಸರ್ಕಾರ ಹಣ ಬಿಡುಗಡೆ ಮಾಡೋದು. ಕಾಮಗಾರಿ ವಿಳಂಬಕ್ಕೆ ಸೂಕ್ತ ಕಾರಣ ನೀಡಬೇಕೆ ಹೊರೆತು ದುರಾಹಂಕಾರ ಮಾತುಗಳನ್ನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

 

ಕಾಮಗಾರಿ ಪೂರ್ಣಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಗುತ್ತಿಗೆದಾರರ ವಿರುದ್ಧ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಆದಷ್ಟು ಬೇಗ ರಸ್ತೆ ಕಾಮಗಾರಿ ಪೂರ್ಣಗೊಳಿಸಲಿ ಎಂಬ ಮಾತುಗಳು ಸಾಮಾಜಿಕ ವಲಯದಲ್ಲಿ ಕೇಳಿಬರುತ್ತಿವೆ.

Leave a Reply

Your email address will not be published. Required fields are marked *