ಕೊಟ್ಟ ಕುದುರೆಯನೇರಲರಿಯದವ ವೀರನೂ ಅಲ್ಲ ಶೂರನೂ ಅಲ್ಲ”ಎಂದರು ಶ್ರೀ ಅಲ್ಲಮ ಪ್ರಭು ದೇವರು. “ಕೈಲಾಗದವ ಮೈಪರಚಿಕೊಂಡ” ಎಂಬ ಗಾದೆಯಂತೆ, ಆಡಳಿತ ನಡೆಸಲಾಗದೆ ರಾಜ್ಯದ ಆರ್ಥಿಕ, ಸಾಮಾಜಿಕ ಪರಿಸ್ಥಿತಿಯನ್ನು ಹಾಳುಗೆಡವುತ್ತಿರುವ ವ್ಯಕ್ತಿಯೊಬ್ಬರು ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀಯವರ ಕುರಿತಾಗಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವುದು ಕನ್ನಡಿಗರ ದುರಂತ ಎಂದು ಸಿ ಟಿ ರವಿ ಗುಡುಗಿದ್ದಾರೆ.
ಪ್ರಧಾನಿಮಂತ್ರಿ ನರೇಂದ್ರ ಮೋದಿ ಕುರಿತಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎಕ್ಸ್ ಪೋಸ್ಟ್ ಕುರಿತಂತೆ ಸಿ.ಟಿ. ರವಿಯವರು ತಮ್ಮ ಎಕ್ಸ್ ಖಾತೆಯಲ್ಲಿ ರಾಜ್ಯದ ಆಡಳಿತ ಮತ್ತು ಅಭಿವೃದ್ಧಿಯ ಕುರಿತಾಗಿ ಕಿಂಚಿತ್ ಯೋಚನೆ ಮಾಡದ ರಾಜ್ಯದ ಮುಖ್ಯಮಂತ್ರಿಗಳು, ದೇಶದ ಸರ್ವತೋಮುಖ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವ “ಕರ್ಮಯೋಗಿ” ಪ್ರಧಾನಿ ಶ್ರೀ ನರೇಂದ್ರಮೋದಿ ಯವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವರು ಮಾಡಿರುವ ಪೋಸ್ಟ್ ಅವರ ಕೀಳು ಮತ್ತು ಹೀನ ಮನಸ್ಥಿತಿಯನ್ನು ತೋರಿಸುತ್ತದೆಯೇ ಹೊರತಾಗಿ ಬೇರೇನೂ ಅಲ್ಲ.
ನಮ್ಮ ರಾಜ್ಯ ಭೀಕರ ಬರಗಾಲವನ್ನು ಎದುರಿಸುತ್ತಿದೆ, ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಆಡಳಿತ ವ್ಯವಸ್ಥೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ, ಕಾಂಗ್ರೆಸ್‌ನ ನೀಡಿದ ಅರೆಬೆಂದ ಗ್ಯಾರೆಂಟಿಗಳು ರಾಜ್ಯವನ್ನು ದಿವಾಳಿತನದತ್ತ ಕೊಂಡೊಯ್ಯುತ್ತಿವೆ. ಇಷ್ಟಾದರೂ “ರೋಮ್ ಹತ್ತಿ ಉರಿಯುತಿದ್ದರೂ ನೀರೋ ಪಿಟೀಲು ಬಾರಿಸುತ್ತಿದ್ದ” ಎನ್ನುವಂತೆ ಇವರು ತಮ್ಮ ತಪ್ಪನ್ನು ಮುಚ್ಚಿಡಲು ಇನ್ನೊಬ್ಬರ ಕಡೆಗೆ ಬೆರಳು ತೋರಿಸುವುದನ್ನು ಬಿಟ್ಟು ಬೇರೇನೂ ಮಾಡುತ್ತಿಲ್ಲ.
ಚುನಾವಣೆ ವೇಳೆ ವಾರೆಂಟಿ ಇಲ್ಲದ ಗ್ಯಾರೆಂಟಿ ಸ್ಕೀಮ್ ನಂತೆ ರಾಜ್ಯದ ಜನರಿಗೆ 10 ಕೆಜಿ ಉಚಿತ ಅಕ್ಕಿ ನೀಡುವುದಾಗಿ ಭರವಸೆ ನೀಡಿದ ಇವರು 7 ತಿಂಗಳಿಂದ ಅಧಿಕಾರದಲ್ಲಿದ್ದರೂ ರಾಜ್ಯದ ಜನತೆಗೆ ಕೇವಲ ಒಂದು ಕೆಜಿ ಅಕ್ಕಿ ಕೂಡ ಕೊಡಲು ಸಾಧ್ಯವಾಗಿಲ್ಲ. ಇನ್ನು ನರೇಂದ್ರ ಮೋದಿಯವರ ಸರಕಾರ ಕೊಡುತ್ತಿರುವ ತಿಂಗಳಿಗೆ 05 ಕೆಜಿ ಅಕ್ಕಿಯನ್ನು ತಾನು ಕೊಟ್ಟಿದ್ದು ಎಂಬ ಸುಳ್ಳನ್ನು ಘಂಟಾಘೋಷವಾಗಿ ಹೇಳುವ ಕಲೆ ಇವರಿಗೆ ಕರತಲಾಮಲಕ.
ರಾಜ್ಯ ಸರಕಾರದ ಎಲ್ಲಾ ವೈಫಲ್ಯಗಳಿಗೆ ಮತ್ತು ಅಸಮರ್ಥತೆಗೆ ಪ್ರಧಾನಿ ಮೋದಿಯವರನ್ನು ದೂಷಿಸಿ, ಬಚಾವಾಗಬಹುದು ಎಂದುಕೊಂಡಿದ್ದಾರೆ.ನಮ್ಮ ಹೆಮ್ಮೆಯ ಪ್ರಧಾನಿ ಮೋದಿಯವರು ಕಳೆದ 23 ವರ್ಷಗಳಿಂದ ಗುಜರಾತ್‌ನ ಮುಖ್ಯಮಂತ್ರಿಯಾಗಿ ಮತ್ತು ಭಾರತದ ಪ್ರಧಾನಿಯಾಗಿ ನಿತ್ಯ 16 ರಿಂದ 18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ ಎಂಬುದು ಇಡೀ ಜಗತ್ತಿಗೆ ತಿಳಿದಿದೆ.
ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಕೆಲಸ ಮಾಡುವುದಕ್ಕಿಂತ ಹೆಚ್ಚು ನಿದ್ರಾಸನದಲ್ಲಿಯೇ ಇರುತ್ತಾರೆ. ಇನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರೇನು ಮಾಡುತ್ತಾರೆ ಎಂಬುದು ನಾನೇನು ವಿಶೇಷವಾಗಿ ಹೇಳಬೇಕಾಗಿಲ್ಲ, ಇಡೀ ಜಗತ್ತಿಗೆ ಗೊತ್ತು.
ರಾಜ್ಯದ ಜನತೆಗೆ ಕಾಂಗ್ರೆಸ್ ಸರಕಾರಕ್ಕಿಂತ ಹೆಚ್ಚಿನ ಕೊಡುಗೆ ನೀಡಿದ ಹಾಗು ಭಾರತವನ್ನು ವಿಶ್ವಗುರುವನ್ನಾಗಿಸಲು ಅಹೋರಾತ್ರಿ ಕೆಲಸ ಮಾಡುವ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಲು ಸಿದ್ದರಾಮಯ್ಯ ಅವರಿಗೆ ಯಾವ ನೈತಿಕ ಹಕ್ಕಿದೆ?
ಹೆಚ್ಚುವರಿ ಆದಾಯ ಇದ್ದ ಕರ್ನಾಟಕ ರಾಜ್ಯವನ್ನು ದಿವಾಳಿ ರಾಜ್ಯವನ್ನಾಗಿಸುವ ಕೆಲಸ ಬಿಟ್ಟರೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ಮತ್ತವರ ಸರಕಾರದ ಸಾಧನೆಗಳೇನು? ತನ್ನ ವೈಫಲ್ಯಕ್ಕೆ ಸದಾ ಇನ್ನೊಬರನ್ನು ದೂರುತ್ತಿರುವ ಇವರು ಕರ್ನಾಟಕದ ಮುಖ್ಯಮಂತ್ರಿಯೇ ಅಥವಾ ಅಳುಮುಂಜಿ ಮಂತ್ರಿಯೇ?
ಸನ್ಮಾನ್ಯ ಸಿದ್ದರಾಮಯ್ಯನವರೇ, ನೀವು ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತು ರಾಜ್ಯದ ಜನತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡುವುದು ಯಾವಾಗ? ಎಂದು ತಮ್ಮ ಎಕ್ಸ್ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.
